ಅಗತ್ಯ ಅಧಿಕಾರವಿದ್ದರೂ ಕೋವಿಡ್ ಮಾರ್ಗಸೂಚಿಗಳ ಜಾರಿ ಚುನಾವಣಾ ಆಯೋಗಕ್ಕೆ ಕಠಿಣವಾಗಲಿದೆ: ಮಾಜಿ ಸಿಇಸಿಗಳು

Update: 2020-10-24 15:36 GMT

ಹೊಸದಿಲ್ಲಿ,ಅ.24: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋವಿಡ್-19 ಮಾರ್ಗಸೂಚಿಗಳ ಉಲ್ಲಂಘನೆಗಾಗಿ ರ‌್ಯಾಲಿಗಳ ನಿಷೇಧ ಮತ್ತು ಮತದಾನ ರದ್ದುಗೊಳಿಸುವಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಅಧಿಕಾರಗಳು ಚುನಾವಣಾ ಆಯೋಗಕ್ಕೆ ಇವೆಯಾದರೂ ಈ ಮಾರ್ಗಸೂಚಿಗಳ ಅನುಷ್ಠಾನ ಕಷ್ಟವಾಗಲಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಮತ್ತು ಇತರ ರಾಜ್ಯಗಳಲ್ಲಿ ಉಪ ಚುನಾವಣೆಗಳಿಗಾಗಿ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದ್ದು, ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ಜಿಲ್ಲಾಡಳಿತಗಳು ದಂಡನಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಚುನಾವಣಾ ಆಯೋಗವು ಈಗಾಗಲೇ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.

ಚುನಾವಣಾ ಆಯೋಗವು ಮಾರ್ಗಸೂಚಿಗಳನ್ನು ಹೇಗೆ ಜಾರಿಗೊಳಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಯೋಗದ ಹಿರಿಯ ಅಧಿಕಾರಿಯೋರ್ವರು, ‘ಅನುಷ್ಠಾನದ ಎಲ್ಲ ಮಾರ್ಗಗಳೂ ಆಯೋಗದ ಬಳಿಯಿವೆ.ಉಲ್ಲಂಘನೆಗಳು ಹೆಚ್ಚಾದಷ್ಟೂ ನಾವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ’ಎಂದು ತಿಳಿಸಿದರು.

  ಒಂದು ಪಕ್ಷ ಅಥವಾ ಓರ್ವ ಅಭ್ಯರ್ಥಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕ್ರಮವನ್ನು ತೆಗೆದುಕೊಳ್ಳಬಹುದು. ಆದರೆ ಸಾರ್ವತ್ರಿಕ ಉಲ್ಲಂಘನೆಯಾಗಿದ್ದರೆ ಇಡೀ ಚುನಾವಣೆಯನ್ನೇ ಮುಂದೂಡಲು ಸಾಧ್ಯವಿಲ್ಲ. ಈ ಸ್ಥಿತಿಯಲ್ಲಿ ಚುನಾವಣೆಗಳಿಗೆ ಆದೇಶಿಸುವಾಗ ಇಂತಹ ಪರಿಣಾಮಗಳನ್ನೂ ನಿರೀಕ್ಷಿಸಿರಬೇಕಾಗುತ್ತದೆ ಎಂದು ಹೇಳಿದ ಮಾಜಿ ಸಿಇಸಿ ವಿ.ಎಸ್.ಸಂಪತ್ ಅವರು,ಮಾರ್ಗಸೂಚಿಗಳನ್ನು ಶೇ.100ರಷ್ಟು ಜಾರಿಗೊಳಿಸುವುದು ಸಾಧ್ಯವಿಲ್ಲ ಮತ್ತು ಆಯೋಗವು ತನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಬೇಕಾಗುತ್ತದೆ. ಅದು ನಾಜೂಕಾದ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ ಮತ್ತು ಬಹುಶಃ ಅದನ್ನೇ ಆಯೋಗವು ಮಾಡುತ್ತಿದೆ ಎಂದರು.

‘ಪ್ರದರ್ಶನಾತ್ಮಕ ಕ್ರಮ’ದ ಅಂಗವಾಗಿ ಆಯೋಗವು ಒಂದೆರಡು ಕ್ಷೇತ್ರಗಳಲ್ಲಿ ಮತದಾನವನ್ನು ರದ್ದುಗೊಳಿಸಲು ದೈನಂದಿನ ಆಧಾರದಲ್ಲಿ ಉಲ್ಲಂಘನೆಗಳನ್ನು ಗಮನಕ್ಕೆ ತೆಗೆದುಕೊಂಡು ಪ್ರಕರಣವನ್ನು ರೂಪಿಸಬಹುದು ಎಂದು ಹೆಸರು ಬಹಿರಂಗಗೊಳಿಸಲು ಬಯಸದ ಇನ್ನೋರ್ವ ಸಿಇಸಿ ಹೇಳಿದರು. ಉದಾಹರಣೆಗೆ ಉಲ್ಲಂಘನೆಗಾಗಿ ಅ.28ರ ಮತದಾನವನ್ನು ರದ್ದುಗೊಳಿಸಿ ಎರಡನೇ ಹಂತದ ನ.3ಕ್ಕೆ ಮತದಾನವನ್ನು ನಡೆಸಬಹುದು, ಇದು ಉಲ್ಲಂಘನೆಗಳನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂಬ ಸಂದೇಶವನ್ನು ರವಾನಿಸುತ್ತದೆ ಎಂದರು.

ಮಾರ್ಗಸೂಚಿಗಳ ಉಲ್ಲಂಘನೆಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಒಂದು ಅಥವಾ ಎರಡು ವರ್ಷಗಳ ಜೈಲುಶಿಕ್ಷೆಗೆ ಒಳಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದು. ಆದರೆ ಸಾವಿರಾರು ಜನರು ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವಾಗ ಎಷ್ಟೊಂದು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯ? ಜಾರಿ ಸಮಸ್ಯೆಗಳು ಇದ್ದೇ ಇವೆ ಎಂದು ಇನ್ನೋರ್ವ ಮಾಜಿ ಸಿಇಸಿ ಒ.ಪಿ.ರಾವತ್ ಹೇಳಿದರು.

ವಿವಿಧ ದೇಶಗಳ ಅನುಭವಗಳ ಆಧಾರದಲ್ಲಿ ಚುನಾವಣಾ ಆಯೋಗವು ಇತ್ತೀಚಿಗೆ ಹೊರಡಿಸಿರುವ ಮಾರ್ಗಸೂಚಿಗಳು ಉತ್ತಮವಾಗಿವೆ ಎಂದು ಹೇಳಿದ ಮಾಜಿ ಸಿಇಸಿ ಎಸ್.ವೈ. ಖುರೇಷಿ ಅವರು,ಇದು ಜಾರಿಯ ಪ್ರಶ್ನೆಯಾಗಿದೆ ಮತ್ತು ಈ ಉಲ್ಲಂಘನೆಗಳ ವಿರುದ್ಧ ಆಯೋಗವು ಈಗ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ತನಗೆ ಖುಷಿ ನೀಡಿದೆ ಎಂದರು.

ಆಯೋಗವು ಮಾರ್ಗಸೂಚಿಗಳನ್ನು ಜಾರಿಗೊಳಿಸಬಹುದು ಮತ್ತು ಉಲ್ಲಂಘನೆಗಳು ನಡೆದರೆ ನಿಯಮಗಳು ಎಲ್ಲ ಪಕ್ಷಗಳಿಗೆ ಅನ್ವಯವಾಗುವವರೆಗೆ ಅಂತಹ  ರ‌್ಯಾಲಿಗಳನ್ನು ರದ್ದುಗೊಳಿಸಬಹುದು. ಉಲ್ಲಂಘನೆಗಳ ವಿಷಯದಲ್ಲಿ ಎಲ್ಲ ಪಕ್ಷಗಳನ್ನು ಸಮಾನವಾಗಿ ಪರಿಗಣಿಸಬೇಕಾಗುತ್ತದೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News