ಧಮ್ ಇದ್ದರೆ ಕೇಂದ್ರದಿಂದ ನೆರೆ ಸಂತ್ರಸ್ತರಿಗೆ ಪರಿಹಾರ ತಂದು ಕೊಡಲಿ: ಬಿಜೆಪಿ ಸಂಸದರಿಗೆ ಸಿದ್ದರಾಮಯ್ಯ ಸವಾಲು

Update: 2020-10-25 12:08 GMT

ಬೆಂಗಳೂರು, ಅ. 25: ರಾಜ್ಯದಲ್ಲಿ ಬಿಜೆಪಿಯ ಇಪ್ಪತ್ತೈದು ಮಂದಿ ಸಂಸದರಿದ್ದರೂ ರಾಜ್ಯಕ್ಕೆ ನಯಾಪೈಸೆ ಪ್ರಯೋಜವಿಲ್ಲ. ಇವರಿಗೆ `ಧಮ್' ಇದ್ದರೆ ಕೂಡಲೇ ಕೇಂದ್ರದಿಂದ ರಾಜ್ಯದಲ್ಲಿನ ನೆರೆ ಸಂತ್ರಸ್ತರಿಗೆ ಪರಿಹಾರ ತಂದು ಕೊಡಲಿ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸವಾಲು ಹಾಕಿದ್ದಾರೆ.

ರವಿವಾರ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಪ್ರವಾಹ ಪೀಡಿತ ಸ್ಥಳಗಳಿಗೆ ಖುದ್ದು ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಆದರೆ, ಈವರೆಗೂ ಸಂತ್ರಸ್ತರಿಗೆ ಒಂದು ಬಿಡಿಗಾಸು ಹಣವನ್ನು ನೀಡಿಲ್ಲ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಕನಿಷ್ಠ ಪಕ್ಷ ಸಂಕಷ್ಟಕ್ಕೆ ಸಿಲುಕಿರುವ ಜನರ ಕಷ್ಟ-ನಷ್ಟಗಳನ್ನು ಆಲಿಸಿಲ್ಲ ಎಂದು ಟೀಕಿಸಿದರು.

ನನ್ನ ಹೇಳಿಕೆಗೆ ಆರೋಪ ಮಾಡುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣಗೆ ಹತ್ತು ಪಟ್ಟು ಧಮ್ ಇರಲಿ. ಅವರಿಗೆ `ಧಮ್' ಇದ್ದರೆ ಪ್ರಧಾನಿ ಮೋದಿಯವರ ಮುಂದೆ ಕೂತು ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ಪರಿಹಾರವನ್ನು ತಂದು ಕೊಡಲಿ. ಅದು ಬಿಟ್ಟು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ನಮ್ಮ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ವಿವಿಧ ಗ್ರಾಮಗಳಿಗೆ ಖುದ್ದು ಭೇಟಿ ನೀಡಿದ ಸಿದ್ದರಾಮಯ್ಯ ರೈತರ ಬೆಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಿ, ರೈತರಿಂದ ನಷ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ವಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ಅಜಯ್ ಸಿಂಗ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News