ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

Update: 2020-10-25 12:17 GMT

ಬೆಂಗಳೂರು, ಅ. 25: 'ಸಿದ್ದರಾಮಯ್ಯನವರೇ ನಿಮ್ಮ ಆಡಳಿತ ರೈತರ ಪಾಲಿಗೆ ಟಿಪ್ಪು ಆಡಳಿತದಂತಿತ್ತು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ರವಿವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ರೈತರ ಪಾಲಿಗೆ ಮರಣಕೂಪದಂತಿದ್ದ ನಿಮ್ಮ ಅವಧಿಯಲ್ಲಿ 3 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡದ್ದು ದುರ್ದೈವ. ಅನ್ನದಾತರು ಸಾವಿಗೆ ಶರಣಾಗುತ್ತಿದ್ದರೆ ನೀವು ಮಾತ್ರ ನೆಮ್ಮದಿಯಾಗಿ ನಿದ್ರಿಸುತ್ತಿದ್ದಿರಿ, ಅಲ್ಲವೇ?' ಎಂದು ಖಾರವಾಗಿ ಪ್ರಶ್ನಿಸಿದೆ.

'ಸಿದ್ದರಾಮಯ್ಯನವರೇ, ನಿಮ್ಮ ದುರಾಡಳಿತದಲ್ಲಿ ಬೆಳಗಾವಿಯ ರೈತ ವಿಠಲ ಅರಭಾವಿ ಆತ್ಮಹತ್ಯೆಯ ಮಾಡಿಕೊಂಡಾಗ, `ರೈತನ ಆತ್ಮಹತ್ಯೆಗೂ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ, ಚೆನ್ನಾಗಿ ಕುಡಿದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಹೇಳಿದ್ದಿರಿ. ಓಬ್ಬ ಮುಖ್ಯಮಂತ್ರಿಯಾಗಿ ಆಡುವ ಮಾತೇ ಇದು ಸಿದ್ದರಾಮಯ್ಯ?' ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ಪ್ರಶ್ನೆ ಮಾಡಿದೆ.

ನೆರೆ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರಕಾರ ನೆರೆ ಸಂತ್ರಸ್ತರಿಗೆ ಈವರೆಗೂ ನಯಾಪೈಸೆ ಹಣ ನೀಡಿಲ್ಲ. ಸಿಎಂ ವೈಮಾನಿಕ ಸಮೀಕ್ಷೆ ನಡೆಸಿದ್ದು, ಸಂಕಷ್ಟದಲ್ಲಿರುವ ಜನರಿಗೆ ಯಾವುದೇ ಪ್ರಯೋಜನವೂ ಆಗಿಲ್ಲ. ಬಿಜೆಪಿಯ ಇಪ್ಪತ್ತೈದು ಮಂದಿ ಸಂಸದರಿದ್ದರೂ ಕೇಂದ್ರ ಸರಕಾರ ಸಂತ್ರಸ್ತರಿಗೆ ಪರಿಹಾರದ ಹಣ ನೀಡುತ್ತಿಲ್ಲ ಎಂದು ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News