ಪಕ್ಷದ ಎಲ್ಲ ಶಾಸಕರು ಸಿದ್ದರಾಮಯ್ಯ ಜೊತೆಗಿದ್ದೇವೆ: ಡಿ.ಕೆ.ಶಿವಕುಮಾರ್

Update: 2020-10-25 12:49 GMT

ಬೆಂಗಳೂರು, ಅ. 25: ರಾಜಕಾರಣದಲ್ಲಿ ನಮಗೆ ಕೆಲವು ವಿದ್ಯೆ ಗೊತ್ತಿರಲಿಲ್ಲ. ಈಗ ಅವರಿಂದ (ಬಿಜೆಪಿ ಅಭ್ಯರ್ಥಿ ಮುನಿರತ್ನ) ಗೊತ್ತಾಗುತ್ತಿದೆ. ನಾನು ಬೆಳೆಯಬೇಕು ಎಂದರೆ ನಾಡಪ್ರಭು ಕೆಂಪೇಗೌಡರ ಪುಸ್ತಕ ಓದಬೇಕು ಎಂಬ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಮುನಿರತ್ನ ವಿರುದ್ಧ ಲೇವಡಿ ಮಾಡಿದ್ದಾರೆ.

ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಕೆಲವರು ಹೇಳಿಕೆ ನೀಡಿರುವುದನ್ನು ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯ ಕೆ.ಬಿ.ಕೋಳಿವಾಡ ಅವರು ಖಂಡಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಪಕ್ಷದಲ್ಲಿ ಯಾರಿಗೆ ಯಾವ ಜವಾಬ್ದಾರಿ ವಹಿಸಿದ್ದೇವೋ ಅವರು ಆ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಚುನಾವಣೆ ಸಮಯ ಬರಲಿ, ಆಗ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡೋಣ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಬೇಕು. ನಮಗೆ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇದೆ. ಈ ಸರ್ಕಾರವನ್ನು ರಾಜ್ಯದ ಜನ ಕಿತ್ತೆಸೆದ ಮೇಲೆ ಆ ಬಗ್ಗೆ ಮಾತನಾಡೋಣ. ಈಗ ಉಪಚುನಾವಣೆ ಬಗ್ಗೆ ಮಾತ್ರ ಮಾತನಾಡೋಣ' ಎಂದು ಹೇಳಿದರು.

ಸರಕಾರ ವಿಫಲ: ರಾಜ್ಯದಲ್ಲಿ ಪ್ರವಾಹ ಎದುರಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಬಡವರ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ಯಾರಿಗೂ ಆಸಕ್ತಿ ಇಲ್ಲ. ಮುಖ್ಯಮಂತ್ರಿಗಳು ಕೇವಲ ಆಶ್ವಾಸನೆ ನೀಡುತ್ತಿದ್ದಾರೆ. ಕಳೆದ ವರ್ಷ ನೆರೆ ಸಮಯದಲ್ಲೂ ಕೇವಲ ಆಶ್ವಾಸನೆ ಕೊಟ್ಟರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ರಾಜ್ಯ ಸರಕಾರದ ಆದ್ಯತೆ ಕೇವಲ ಚುನಾವಣೆಯೇ ಹೊರತು ನೆರೆ ಸಂತ್ರಸ್ತರಲ್ಲ. ಜನರ ನೋವಿಗೆ ಸ್ಪಂದಿಸಲು ಸರಕಾರ ವಿಫಲವಾಗಿದೆ. ಹೊಸದಿಲ್ಲಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ತಮ್ಮದೇ ಪಕ್ಷದ ನಾಯಕರನ್ನು, ಸಂಸದರನ್ನು ಕರೆದುಕೊಂಡು ಹೋಗಿ ರಾಜ್ಯಕ್ಕೆ ಹಣ ತರಲು ಅವರಲ್ಲಿ ಇವರಿಗೆ ಶಕ್ತಿ ಇಲ್ಲ ಎಂದು ಶಿವಕುಮಾರ್ ಟೀಕಿಸಿದರು.

ಸಿದ್ದರಾಮಯ್ಯ ಜೊತೆ ಇದ್ದೇವೆ: ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು. ಪಕ್ಷದ ಎಲ್ಲ ಶಾಸಕರು ಅವರ ಜತೆಗಿದ್ದೇವೆ. ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾವೆಲ್ಲರೂ ಅವರ ಜತೆ ಇದ್ದೆವು. ಅವರ ಜತೆ ಇದ್ದರೆ ತಪ್ಪೇನು? ಎಂದು ಶಿವಕುಮಾರ್ ಪ್ರಶ್ನಿಸಿದರು.

ದೂರು ದಾಖಲಿಸಿರುವುದು ಸಂತೋಷ

ನನ್ನ ಹೇಳಿಕೆ ವಿರುದ್ಧ ಬಿಜೆಪಿ ಕಾನೂನು ವಿಭಾಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಸಂತೋಷ. ಆದರೆ ವಿಧಾನಸೌಧದಲ್ಲಿ ಶ್ರೀನಿವಾಸಗೌಡರು ತಮ್ಮ ಮನೆಗೆ ಅಶ್ವತ್ಥ ನಾರಾಯಣ ಅವರು 5 ಕೋಟಿ ರೂಪಾಯಿ ತಂದಿದ್ದರು ಎಂದು ಹೇಳಿಕೆ ಕೊಟ್ಟಾಗ ಎಲ್ಲಿ ಹೋಗಿತ್ತು ಈ ಕಾನೂನು ವಿಭಾಗ? ಆಗ ಐಟಿ, ಸಿಬಿಐ ಸಂಸ್ಥೆಗಳು ಎಲ್ಲಿ ಹೋಗಿದ್ದವು? ಬಿಜೆಪಿ ಕಾನೂನು ವಿಭಾಗವು ಯಾಕೆ ಅವರಿಗೆ ನೋಟಿಸ್ ಕೊಡಲಿಲ್ಲ?'.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News