ನನ್ನ ವಿರುದ್ಧ ಟೀಕೆಗೆ ಬಿಜೆಪಿಯು ಒಕ್ಕಲಿಗ ಜಾತಿ ಕಾರ್ಡ್ ಬಳಸುತ್ತಿದೆ: ಡಿ.ಕೆ.ಶಿವಕುಮಾರ್

Update: 2020-10-25 12:57 GMT

ಬೆಂಗಳೂರು, ಅ. 25: `ಉಪಚುನಾವಣೆಯಲ್ಲಿ ನಾನು ಜಾತಿ ಕಾರ್ಡ್ ಬಳಸುತ್ತಿದ್ದೇನೆ ಎಂದು ಆರೋಪ ಮಾಡುತ್ತಿರುವ ಬಿಜೆಪಿ, ನನ್ನ ವಿರುದ್ಧ ಟೀಕೆ ಮಾಡಲು ಡಿಸಿಎಂ ಡಾ.ಅಶ್ವತ್ಥ ನಾರಾಯಣ, ಸಚಿವರಾದ ಅಶೋಕ್, ಸೋಮಶೇಖರ್, ಸಿ.ಟಿ.ರವಿ ಅವರನ್ನು ಬಿಟ್ಟು ಯಾವ ಕಾರ್ಡ್ ಬಳಸುತ್ತಿದೆ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಜಾತಿ ಕಾರ್ಡ್ ಬಳಕೆ ಮಾಡುವ ಮೂಲಕ, ಬಿಜೆಪಿ ನನ್ನ ಮೇಲೆ ವಾಗ್ಪ್ರಹಾರ ನಡೆಸಲು ಮಂತ್ರಿ ಮಂಡಲದಲ್ಲಿರುವ ಒಕ್ಕಲಿಗ ಮುಖಂಡರನ್ನೇ ಛೂಬಿಟ್ಟಿದೆ. ಒಕ್ಕಲಿಗ ಜಾತಿ ಕಾರ್ಡನ್ನೇ ಬಳಸಿಕೊಳ್ಳುತ್ತಿದೆ. ಪಕ್ಷ ಬಿಟ್ಟು ಬಿಜೆಪಿಗೆ ಹೋಗಲು ನಾನು ಕಾರಣ ಎಂದು ಹೇಳಿರುವವರಿಗೆ ಒಳ್ಳೆಯದಾಗಲಿ. ಹಬ್ಬದ ದಿನ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅವರಿಗೆ ಆದಷ್ಟು ಬೇಗನೆ ಬಡ್ತಿ ಸಿಗಲಿ ಎಂದು ಮುನಿರತ್ನ ಹೆಸರು ಉಲ್ಲೇಖಿಸದೆ ಲೇವಡಿ ಮಾಡಿದರು.

`ಅವರಿಗೆ ಮಾರ್ಕೆಟ್ ಬೇಕು, ಪ್ರಮೋಷನ್ ಬೇಕು' ಎಂದು ನನ್ನ ಬಗ್ಗೆ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ನಮ್ಮ ಬಗ್ಗೆ ಮಾತನಾಡಿದರೆ ಮಾಧ್ಯಮಗಳು ಚೆನ್ನಾಗಿ ಪ್ರಚಾರ ಮಾಡುತ್ತವೆ. ಇಲ್ಲವಾದರೆ ಅವರನ್ನು ತೋರಿಸುವುದಿಲ್ಲ. ಹೀಗಾಗಿ ಅವರು ನನ್ನ ಹಾಗೂ ಸಿದ್ದರಾಮಯ್ಯನವರ ಹೆಸರನ್ನು ಎಲ್ಲೆಲ್ಲಿ ಬಳಸಿಕೊಳ್ಳಬೇಕೋ ಅಲ್ಲಿ ಯಥೇಚ್ಛವಾಗಿ ಬಳಸಿಕೊಳ್ಳುತ್ತಿದ್ದಾರೆ' ಎಂದು ಶಿವಕುಮಾರ್, ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.

'ಕೆಲವರು ಕಾಂಗ್ರೆಸ್ಸಿಗೆ ಬೀಳುವ ಅಲ್ಪಸಂಖ್ಯಾತರ ಮತಗಳನ್ನು ತಪ್ಪಿಸಲು ಮತದಾರರ ಗುರುತಿನ ಚೀಟಿ ಕಸಿದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಯಾರು ಹೆದರಿಸುತ್ತಿದ್ದಾರೆ ಎಂಬುದರ ಬಗ್ಗೆ ಮತದಾರರೇ ಉತ್ತರ ನೀಡಲಿದ್ದಾರೆ' ಎಂದು ಶಿವಕುಮಾರ್ ಇದೇ ವೇಳೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News