ಪ್ರಪಂಚ ಮೆಚ್ಚುವ ಆಡಳಿತವನ್ನು ನರೇಂದ್ರ ‌ಮೋದಿ ನೀಡುತ್ತಿದ್ದಾರೆ: ಯಡಿಯೂರಪ್ಪ

Update: 2020-10-25 14:06 GMT

ಶಿವಮೊಗ್ಗ, ಅ.25: ಶಿರಾ ಹಾಗೂ ಆರ್‌ಆರ್ ನಗರ ಉಪ ಚುನಾವಣೆ ಮಾತ್ರವಲ್ಲದೆ ಮುಂದಿನ ಎಲ್ಲ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿರಾ ಮತ್ತು ಆರ್‌ಆರ್ ನಗರದಲ್ಲಿ ‌ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಪಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂದರು.

ಪ್ರಪಂಚ ಮೆಚ್ಚುವಂಥ ಆಡಳಿತವನ್ನು ನರೇಂದ್ರ ‌ಮೋದಿಯವರು ನೀಡುತ್ತಿದ್ದಾರೆ. ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿಯಾಗುತ್ತಾರೆ ಎಂದರು.

ಪರಿಹಾರ ಕಾರ್ಯ ಚುರುಕು: ರಾಜ್ಯದಲ್ಲಿ‌ ಹಿಂದೆಂದೂ ಕಂಡರಿಯದ ರೀತಿ ಪ್ರವಾಹ ಬಂದಿದೆ. ಬೆಂಗಳೂರಿನಲ್ಲಿಯೂ ಭಾರೀ ಮಳೆಯಾಗಿ ಮನೆಗಳು ಜಲಾವೃತವಾಗಿವೆ. ನಾನು ಈಗಾಗಲೇ 600ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಯಾವ ಮನೆಗಳಿಗೆ ನೀರು ನುಗ್ಗಿದೆಯೋ ಅವರಿಗೆ 25 ಸಾವಿರ ರೂ. ಪರಿಹಾರ ನೀಡಲು ಸೂಚಿಸಿದ್ದೇನೆ. ಪರಿಹಾರ ನೀಡುವ ಕಾರ್ಯ ಆರಂಭಗೊಂಡಿದೆ ಎಂದರು.

ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದ‌ ಅವರು, ನವೆಂಬರ್ 17ರಿಂದ ರಾಜ್ಯದಲ್ಲಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳನ್ನು ಆರಂಭಿಸುತ್ತೇವೆ. ಯಾರಿಗೆ ಆಸಕ್ತಿ ಇದೆಯೋ ಅವರು ಕಾಲೇಜಿಗೆ ಬರಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News