ಕಸಾಪ ಕನ್ನಡಿಗರ ಹೆಮ್ಮೆಯ ಸಂಸ್ಥೆ: ಸಚಿವ ಎಸ್.ಟಿ.ಸೋಮಶೇಖರ್

Update: 2020-10-25 15:11 GMT

ಮೈಸೂರು, ಅ.25 : ಕನ್ನಡ ಸಾಹಿತ್ಯ ಪರಿಷತ್ತು ಆರುವರೆ ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಹೆಮ್ಮೆಯ ಸಂಸ್ಥೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನಕ್ಕೆ ಭೇಟಿ ನೀಡಿ ಅಧ್ಯಕ್ಷರಾದ ಡಾ.ವೈ.ಡಿ. ರಾಜಣ್ಣ ಹಾಗೂ ಪದಾಧಿಕಾರಿಗಳೊಂದಿಗೆ ಕನ್ನಡ ಚಟುವಟಿಕೆಗಳ ಬಗ್ಗೆ ವಿಚಾರ ವಿನಿಮಯ ಮಾಡಿ ಅವರು ಮಾತನಾಡಿದರು.

ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅಪಾರ. ಅವರ ದೂರದೃಷ್ಟಿ ಆಲೋಚನೆಯಿಂದ ಆರಂಭಗೊಂಡ ಕನ್ನಡ ಸಾಹಿತ್ಯ ಪರಿಷತ್ತು ನೂರಾರು ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಎಂದು ಪ್ರಶಂಸಿದರು. 

ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಒಳಗೊಂಡಂತೆ ಪ್ರತಿಯೊಂದು ಕಾರ್ಯಕ್ರಮಕ್ಕೂ ಒತ್ತಾಸೆಯಾಗಿ ನಿಲ್ಲುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು. 

ಕೋವಿಡ್ ಹಿನ್ನೆಲೆ ಈ ಬಾರಿ ಜಿಲ್ಲಾಡಳಿತ ದಸರಾ ಕವಿಗೋಷ್ಠಿಯನ್ನು ಆಯೋಜಿಸಿಲ್ಲ. ಆದರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಸರಾ ಕವಿ ಗೋಷ್ಠಿಯನ್ನು ಯಶಸ್ವಿಯಾಗಿ ನಡೆಸಿದೆ. ಸಚಿವ ಸಂಪುಟ ಸಭೆಯ ತುರ್ತು ಕಾರ್ಯನಿಮಿತ್ತ ಕವಿಗೋಷ್ಠಿ ಉದ್ಘಾಟನೆಗೆ ಬರಲಾಗಲಿಲ್ಲ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಕಿರು ಸಭಾಂಗಣ, ಪರಿಷತ್ ಗ್ರಂಥಾಲಯ ಹಾಗೂ ಕಲಾ ಗ್ಯಾಲರಿಯೊಳಗೊಂಡ ಕಟ್ಟಡ ಆಗಬೇಕಿದ್ದು, ಅದಕ್ಕೆ ಅನುದಾನದ ನೆರವು ನೀಡಬೇಕೆಂದು ಸಚಿವರಿಗೆ ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು. 

ಈ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ವೈ.ಡಿ. ರಾಜಣ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಗುಬ್ಬಿಗೂಡು ರಮೇಶ್, ಪ್ರೊ.ಎಸ್.ಶಿವರಾಜಪ್ಪ, ಎಸ್.ನಾಗರಾಜು, ಡಾ.ಸುಧಾಕರ ಹೊಸಳ್ಳಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News