ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ ಸಿಎಂ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್

Update: 2020-10-26 03:39 GMT

ಬೆಂಗಳೂರು, ಅ.25: ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಆಗಿರುವ ಕಾರಣ ತಮ್ಮನ್ನು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವುದು ಬೇಡ ಎಂದು ಹಿರಿಯ ಪತ್ರಕರ್ತ ಮಹಾದೇವ ಪ್ರಕಾಶ್‌ ಅವರು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮಾಧ್ಯಮ ಸಲಹೆಗಾರ ಜವಾಬ್ದಾರಿಯಲ್ಲಿ ಇರುವ ನಾನು ಈ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದು ನೈತಿಕವಾಗಿ ಸರಿಯಲ್ಲವೆಂದು ನನ್ನ ಭಾವನೆ. ಮುಖ್ಯಮಂತ್ರಿಗಳು ನನ್ನ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿದ್ದರೂ ಅದಕ್ಕೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ ಇಂದು ಅವರು ತಿಳಿಸಿದ್ದಾರೆ. ವಿಶೇಷವೆಂದರೆ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸರಕಾರ ಇನ್ನೂ ಪ್ರಕಟಿಸಿಲ್ಲ. 

'ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಜುಗರಕ್ಕೆ ಗುರಿ ಮಾಡುವುದು ಸರಿಯಲ್ಲ ಎಂದು ಭಾವಿಸಿದ್ದೇನೆ. ಇದನ್ನು ಅಹಂಕಾರ ಎಂದು ಯಾರೂ ಪರಿಗಣಿಸಬೇಕಿಲ್ಲ. ಅತ್ಯಂತ ವಿನಯಪೂರ್ವಕವಾಗಿ ಕನ್ನಡ ರಾಜ್ಯೊತ್ಸವ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ. ನನ್ನ ಬಗ್ಗೆ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ ವಿಶ್ವಾಸಕ್ಕೆ ಹೃದಯಪೂರ್ವಕ ಧನ್ಯವಾದಗಳು' ಎಂದು ಅವರು ತಿಳಿಸಿದ್ದಾರೆ.

ಪತ್ರಿಕೋದ್ಯಮದಲ್ಲಿ 46 ವರ್ಷಗಳ ಅನುಭವ ಹೊಂದಿದ್ದೇನೆ. ಸಂಪಾದಕನಾಗಿ, ಅಂಕಣಕಾರನಾಗಿ, ರಾಜಕೀಯ ವಿಶ್ಲೇಷಕನಾಗಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿನನ್ನ ಇರುವಿಕೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶನ ಮಾಡಿದ್ದೇನೆ. ಇದನ್ನು ಪರಿಗಣಿಸಿ ಸಿಎಂ ಯಡಿಯೂರಪ್ಪ ಅವರು ನನ್ನ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಆದರೆ ನಾನು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮಾಧ್ಯಮ ಸಲಹೆಗಾರ ಆಗಿರುವುದರಿಂದ ಈ ಪ್ರಶಸ್ತಿ ಸ್ವೀಕರಿಸುವುದು ನೈತಿಕವಾಗಿ ಸರಿಯಲ್ಲವೆಂದು ಅವರು ಕಾರಣ ನೀಡಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಗಾಗಿ ಎಂದೂ ಲಾಬಿ ಮಾಡಿಲ್ಲ. ಈ ಬಾರಿ ಅಧಿಕಾರದ ಬಲದಿಂದ ಪ್ರಶಸ್ತಿ ಪಡೆದೆ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಮೂಡಬಾರದು. ನಮ್ಮ ನಡೆ ನುಡಿ ಇತರರಿಗೆ ಮಾದರಿ ಆಗಬೇಕೇ ಹೊರತು ಮಾರಕ ಆಗಬಾರದು ಅನ್ನುವ ದೃಷ್ಟಿಯಿಂದ ಪ್ರಶಸ್ತಿ ನಿರಾಕರಿಸುವ ನಿರ್ಧಾರ ಮಾಡಿರುವೆ ಎಂದು ಮಹಾದೇವ ಪ್ರಕಾಶ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News