ದಸರಾ ಜಂಬೂ ಸವಾರಿಗೆ ಕ್ಷಣಗಣನೆ: ಸಾರ್ವಜನಿಕ ವೀಕ್ಷಣೆಗಿಲ್ಲ ಅವಕಾಶ

Update: 2020-10-26 06:58 GMT

ಮೈಸೂರು, ಅ.26: ದಸರಾ ಜಂಬೂ ಸವಾರಿಯ ಸಂದರ್ಭ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಜಿಲ್ಲಾಡಳಿತ, ಅರಮನೆ ಸುತ್ತಲೂ ಬ್ಯಾರಿಕೇಡ್ ಗಳನ್ನು ಹಾಕಿ ರಸ್ತೆಗಳನ್ನು ಮುಚ್ಚಿದೆ. ಎಲ್ಲೆಡೆ  ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ದಸರಾ ಜಂಬೂ ಸವಾರಿ ಮಧ್ಯಾಹ್ನ 2:59ಕ್ಕೆ ಪ್ರಾರಂಭವಾಗಲಿದ್ದು, ಅರಮನೆಯೊಳಗೆ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಕೊರೋನ ನಿಯಂತ್ರಣ ತಂಡ ಈ ಹಿಂದೆ ಮೈಸೂರಿಗೆ ಭೇಟಿ ನೀಡಿ ದಸರಾ ಉದ್ಘಾಟನೆಗೆ 200 ಮಂದಿ, ಜಂಬೂ ಸವಾರಿ ವೀಕ್ಷಣೆಗೆ 300 ಮಂದಿಗಷ್ಟೆ ಅವಕಾಶ ನೀಡುವಂತೆ ಸೂಚಿಸಿತ್ತು. ಅದರಂತೆ ಜಂಬೂ ಸವಾರಿಗೆ 300 ಜನಕ್ಕಷ್ಟೆ ಅವಕಾಶ ನೀಡುವ ಸಲುವಾಗಿ ಅರಮನೆಯ ಸುತ್ತಲೂ ಇರುವ ಸಯ್ಯಾಜಿರಾವ್ ರಸ್ತೆ, ಮೈಸೂರು-ನಂಜನಗೂಡು ರಸ್ತೆ, ಕೋಟೆ ಆಂಜನೇಯ ದೇವಸ್ಥಾನದ ರಸ್ತೆ, ನಗರ ಬಸ್ ನಿಲ್ದಾಣ ರಸ್ತೆ, ಗನ್ ಹೌಸ್ ರಸ್ತೆ ಸೇರಿದಂತೆ ಅರಮನೆ ಸುತ್ತ ಇರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಸೋಮವಾರ ಬೆಳಗ್ಗೆಯಿಂದಲೇ ಅಕ್ಕ ಪಕ್ಕದ ಊರುಗಳಿಂದ ಸಾರ್ವಜನಿಕರು ದಸರಾ ನೋಡಲು ಆಗಮಿಸುತ್ತಿದ್ದು ಅವರೆಲ್ಲರನ್ನುಅರ್ಧದಲ್ಲಿಯೇ ಪೊಲೀಸರು ತಡೆದು ಹಿಂದಕ್ಕೆ ಕಳುಹಿಸುತ್ತಿದ್ದಾರೆ.

ದಸರಾ ಮುಗಿಯುವವರೆಗೂ ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳು ಚಾಮುಂಡಿ ಬೆಟ್ಟ, ನಂಜನಗೂಡು ಶ್ರೀಶ್ರೀಕಂಠೇಶ್ವರ ದೇವಸ್ಥಾನ ಸೇರಿದಂತೆ ಹಲವು ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಅದರ ನಾಳೆಗೆ ಮುಖ್ಯಮಂತ್ರಿ ನಿರ್ಬಂಧ ವಾಪಸ್ ಪಡೆದು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಆದೇಶ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News