ಸಿಗಂದೂರು ಚಲೋ ಚಳವಳಿ ತಾತ್ಕಾಲಿಕವಾಗಿ ಮುಂದೂಡಿಕೆ: ಸತ್ಯಜಿತ್‌

Update: 2020-10-26 08:17 GMT

ಶಿವಮೊಗ್ಗ, ಅ.26: ಶೇಷಗಿರಿ ಭಟ್ ಹಠಾವೋ, ಸಿಗಂದೂರು ಬಚಾವೋ ಘೋಷಣೆಯೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರು ಪರಿಪಾಲನಾ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಿಗಂದೂರು ಚಲೋ ಚಳವಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಪರಿಷತ್ ಗೌರವಾಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಶೇಷಗಿರಿ ಭಟ್ ಸಹೋದರ ದೇವಸ್ಥಾನದಲ್ಲಿ ಮಾಡಿದ ರಂಪಾಟ, ಹಲ್ಲೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಈ ಹಿನ್ನಲೆಯಲ್ಲಿ  ಅಕ್ಟೋಬರ್ 29ರಂದು ಸಿಗಂದೂರು ಲಾಂಚ್‌ನಿಂದ ದೇವಸ್ಥಾನದವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸತ್ಯಜಿತ್‌ ಸುರತ್ಕಲ್ ಹೇಳಿದರು.

ರಾಜ್ಯದ ನೂರಾರು ಮಠಗಳು ಸರಕಾರಿ ಜಮೀನಿನಲ್ಲಿವೆ. ಈ ಬಗ್ಗೆ ಸರಕಾರ ಯಾಕೆ ಗಮನಹರಿಸುತ್ತಿಲ್ಲ. ಹಿಂದುಳಿದ ವರ್ಗದ ಆಡಳಿತ ಇರುವ ದೇವಸ್ಥಾನ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯದ ಬಗ್ಗೆ ಮಾತ್ರ ಏಕೆ ಆಕ್ಷೇಪ ಎಂದು ಅವರು ಪ್ರಶ್ನಿಸಿದರು. 

ಸರಕಾರ ಈಗಾಗಲೇ ಸಮಿತಿ ರಚಿಸಿರುವುದನ್ನು ಗಮನಿಸಿದರೆ ಸಿಗಂದೂರು ದೇವಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದ ಒಂದು ಭಾಗವಾಗಿದೆ. ಉಡುಪಿ ಶ್ರೀ ಕೃಷ್ಣ ಮಠ ಅಷ್ಟಮಠಕ್ಕೆ ಸೇರಿದ ಕಾರಣ ಕೈಬಿಡಲಾಗಿತ್ತು ಮತ್ತು ಧರ್ಮಸ್ಥಳ ಒಂದೇ ಕುಟುಂಬಕ್ಕೆ ಸೇರಿದ ದೇವಸ್ಥಾನವಾಗಿದೆ. ಅದೇ ರೀತಿ ಶೇಷಾನಾಯ್ಕರಿಗೆ ದೊರೆತ ಸಿಗಂದೂರು ಈಡಿಗರಿಗೆ ಸೇರಿದೆ‌. ಹಾಗಾಗಿ ಸರಕಾರ ಮುಜರಾಯಿ ಇಲಾಖೆಗೆ ಸೇರಿಸಬಾರದು ಎಂದವರು  ಆಗ್ರಹಿಸಿದರು.

ದೇವಸ್ಥಾನದ ಪಾರದರ್ಶಕತೆಗೆ ಸಲಹಾ ಸಮಿತಿ ತಾತ್ಕಾಲಿಕ ರಚನೆ ಆಗಿದೆ. ಇದನ್ನು ಪರಿಷತ್ ಒಪ್ಪಿಕೊಳ್ಳುವುದಿಲ್ಲ. ಶೇಷಗಿರಿ ಭಟ್ಟರು ತಮ್ಮ ತಪ್ಪು ತಿದ್ದಿಕೊಳ್ಳಬೇಕು. ದೇವಸ್ಥಾನದಲ್ಲಿ ಬಡಿದಾಟ ನಡೆಸುವುದು ಸಹ್ಯವಲ್ಲ ಎಂದರು.

ಆರೆಸ್ಸೆಸ್ ಮುಖಂಡ ಪಟ್ಟಾಭಿ ರಾಮ್ ಹಿಂದುಳಿದ ಸಮಾಜದ ಸಮಸ್ಯೆಗಳನ್ನ ಬಗೆಹರಿಸಲು ಮುಂಚೂಣಿ ವಹಿಸಬೇಕು. ಸಿಎಂ ಮನವೊಪ್ಪಿಸಿ ಸಲಹ ಸಮಿತಿ ಹಿಂಪಡೆಯುವಂತೆ ಮಾಡಬೇಕು. ರಾಮಪ್ಪನವರ ಕುಟುಂಬಕ್ಕೆ ವಾಪಸ್ ನೀಡಬೇಕು. ರಾಘವೇಶ್ವರ ಭಾರತೀ ಸ್ವಾಮೀಜಿಯವರು ಇದನ್ನ ಮನಗೊಂಡು ರಾಮಪ್ಪ ಕುಟುಂಬಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶ್ರೀಧರ್ ಹುಲ್ತಿಕೊಪ್ಪ, ಮಂಜುನಾಥ್ ನಾಯ್ಕ್, ಸೂರಜ್ ನಾಯ್ಕ್ ಸೋನಿ, ರಾಘವೇಂದ್ರ ನಾಯ್ಕ್, ಸುಧಾಕರ್ ನಿಡಗೋಡು, ಪ್ರವೀಣ್ ಹಿರೇಗೊಡು, ಸೈದಪ್ಪ ಗುತ್ತೇದಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News