ವಿಧಾನ ಮಂಡಲ 'ವಿಶೇಷ ಅಧಿವೇಶನ' ಕರೆಯಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ

Update: 2020-10-26 12:46 GMT

ಬೀದರ್, ಅ. 26: ರಾಜ್ಯದಲ್ಲಿ ಮೂರು ತಿಂಗಳುಗಳಿಂದ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ರೈತರು ಬೆಳೆ-ಮನೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಇಂದಿಲ್ಲಿ ಒತ್ತಾಯಿಸಿದ್ದಾರೆ.

ಬೀದರ್ ಮತ್ತು ಕಲಬುರಗಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಒಂದೆಡೆ ಕೊರೋನ, ಇನ್ನೊಂದೆಡೆ ಪ್ರವಾಹ, ಮತ್ತೊಂದೆಡೆ ಹಾಳಾಗಿ ಹೋಗಿರುವ ಶಾಂತಿ ಮತ್ತು ಸುವ್ಯವಸ್ಥೆ. ಇವೆಲ್ಲದರ ನಡುವೆ ಭ್ರಷ್ಟಾಚಾರದ ಹಗರಣಗಳು. ಇವೆಲ್ಲದರ ಬಗ್ಗೆ ಶಾಸಕರು ಚರ್ಚೆ ನಡೆಸಲು ವಿಧಾನ ಮಂಡಲ ಅಧಿವೇಶನವೇ ಸೂಕ್ತ ವೇದಿಕೆ. ವಿರೋಧ ಪಕ್ಷಗಳನ್ನು ಎದುರಿಸುವ ಧೈರ್ಯ ಇಲ್ಲದ ರಾಜ್ಯ ಸರಕಾರ ಅಧಿವೇಶನವನ್ನೇ ನಡೆಸದೆ ತಪ್ಪಿಸಿಕೊಳ್ಳುತ್ತಿದೆ ಎಂದು ದೂರಿದರು.

ಇಲ್ಲಿಯವರೆಗೆ ರಾಜ್ಯ ಸರಕಾರ ಪ್ರವಾಹದಿಂದಾಗಿರುವ ನಷ್ಟದ ಸಮೀಕ್ಷೆ ಮಾಡಿಲ್ಲ. ಮುಖ್ಯಮಂತ್ರಿ ವಿಮಾನದಲ್ಲಿ ನೋಡಿ ಹೋದರು, ಕಂದಾಯ ಸಚಿವರು ಕಾಟಾಚಾರಕ್ಕೆ ಭೇಟಿ ನೀಡಿದರು, ಜಿಲ್ಲಾ ಸಚಿವರಾಗಲಿ, ಅಧಿಕಾರಿಗಳು ಜನರ ಬಳಿ ಹೋಗಿಯೇ ಇಲ್ಲ. ಇಡೀ ಸರಕಾರವೇ ನೆರೆಯಲ್ಲಿ ಕೊಚ್ಚಿಕೊಂಡ ಹೋಗಿರುವಂತಹ ದುಸ್ಥಿತಿ ಇದೆ ಎಂದು ಟೀಕಿಸಿದ ಅವರು, ರೈತರು ಮುಂಗಾರು ಬೆಳೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ನೆರೆ ನೀರಿನ ಶೀತ ಕಡಿಮೆಯಾಗದಿರುವ ಕಾರಣ ಹಿಂಗಾರು ಬಿತ್ತನೆ ಮಾಡುವ ಹಾಗಿಲ್ಲ. ಎರಡೂ ಬೆಳೆಗಳನ್ನು ಕಳೆದುಕೊಂಡಿರುವ ರೈತರ ಕಷ್ಟಗಳನ್ನು ಕೇಳುವವರೇ ಇಲ್ಲ. ಇದೊಂದು ಪಂಚೇಂದ್ರಿಯವನ್ನು ಕಳೆದುಕೊಂಡ ಮರಗಟ್ಟಿಹೋಗಿರುವ ಸರಕಾರ ಎಂದು ವಾಗ್ದಾಳಿ ನಡೆಸಿದರು.

ರೈತರ ಬೆಳೆನಷ್ಟಕ್ಕೆ ಪರಿಹಾರ ನೀಡುವಾಗ ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಿದರೆ ರೈತರ ಕಷ್ಟ ದೂರವಾಗಲಾರದು. ನಾನು ಒಂದು ಹೆಕ್ಟೇರ್‍ಗೆ 25 ಸಾವಿರ ರೂ.ಪರಿಹಾರ ಕೊಟ್ಟಿದ್ದೆ. ಕಳೆದ ವರ್ಷದ ಪ್ರವಾಹದಿಂದಾಗಿರುವ ಹಾನಿಗೆ ಇಲ್ಲಿಯ ವರೆಗೆ ಪರಿಹಾರ ನೀಡಿಲ್ಲ. ನೆರೆ ಸಂತ್ರಸ್ತರಿಗೆ ಸರಕಾರ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

`ಕಳೆದ ವಾರ ಬಾದಾಮಿಗೆ ಭೇಟಿ ನೀಡಿದ್ದೆ. ಇದೀಗ ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್, ಯಾದಗಿರಿ ಹೋಗಿ ಅಲ್ಲಿಂದ ಕಲಬುರಗಿ ಜಿಲ್ಲೆಯಲ್ಲಿನ ನೆರೆ ಪರಿಸ್ಥಿತಿಯನ್ನು ನಾನು ಕಣ್ಣಾರೆ ನೋಡಿದ್ದು ಮತ್ತು ಕೇಳಿದ್ದನ್ನು ಆಧರಿಸಿ ಸಿಎಂ ಯಡಿಯೂರಪ್ಪವರಿಗೆ ವಿಸ್ತೃತವಾದ ಪತ್ರ ಬರೆಯುತ್ತೇನೆ. ಒಂದು ಅಂದಾಜಿನ ಪ್ರಕಾರ ಆರುಕಾಲು ಲಕ್ಷ ಎಕರೆಯಲ್ಲಿ ರೈತರು ಬೆಳೆ ಕಳೆದುಕೊಂಡಿದ್ದು, ಬೆಳೆಹಾನಿಯಿಂದಲೇ 1,500ಕೋಟಿ ರೂ.ನಷ್ಟವಾಗಿದೆ. 1,700 ಮನೆಗಳು ಬಿದ್ದಿವೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಲ್ಲಿಯ ವರೆಗೆ ನಯಾಪೈಸೆ ಪರಿಹಾರವನ್ನೂ ಕೊಟ್ಟಿಲ್ಲ'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News