ಹೊರನಾಡು ದೇವಾಲಯದ ಧರ್ಮದರ್ಶಿ ಕುಟುಂಬದವರಿಂದ ಗನ್‍ಗಳ ದುರ್ಬಳಕೆ: ಆರೋಪ

Update: 2020-10-26 16:24 GMT

ಚಿಕ್ಕಮಗಳೂರು, ಅ.26: ವಿಜಯದಶಮಿ ಹಬ್ಬದ ಅಂಗವಾಗಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆವರಣದಲ್ಲಿ ಸೋಮವಾರ ಬಂದೂಕುಗಳ ಆರ್ಭಟ ನಡೆದಿರುವ ಬಗ್ಗೆ ವರದಿಯಾಗಿದೆ.

ಸಾಮಾನ್ಯವಾಗಿ ಆಯುಧ ಪೂಜೆಯ ಮಾರನೆ ದಿನ ನಡೆಯುವ ವಿಜಯದಶಮಿಯ ದಿನದಂದು ಮಲೆನಾಡಿಗರು ನಾಡ ಕೋವಿಗಳಿಂದ ತೆಂಗಿನಕಾಯಿಗೆ ಗುರಿ ಹೊಡೆಯುವ ಇಂಬು ಹೊಡೆಯುವಂತಹ ಪದ್ಧತಿಯನ್ನು ಆಚರಿಸುತ್ತಾರೆ. ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ತಾಲೂಕುಗಳ ವ್ಯಾಪ್ತಿಯಲ್ಲಿ ವಿಜಯದಶಮಿಯ ದಿನದಂದು ಇಂದಿಗೂ ಈ ಪದ್ಧತಿಯನ್ನು ಆಚರಿಸುತ್ತಾರೆ. ನಾಡ ಬಂದೂಕು ಅಥವಾ ಕೋವಿಗಳಿಂದ ಕಾಯಿಗೆ ಗುಂಡು ಹೊಡೆಯುವ ಪದ್ಧತಿ ಸಾಂಪ್ರದಾಯದಂತೆ ನಡೆಯುತ್ತಿರುವುದರಿಂದ ಇದಕ್ಕೆ ಪೊಲೀಸ್ ಇಲಾಖೆಯ ಅನುಮತಿ ಪಡೆಯುವ ವಾಡಿಕೆಯೇ ಇಲ್ಲ ಎನ್ನಲಾಗಿದೆ.
ಆದರೆ, ಜಿಲ್ಲೆಯ ಹೆಸರಾಂತ ಧಾರ್ಮಿಕ ಕ್ಷೇತ್ರವಾಗಿರುವ ಹಾಗೂ ರಾಜ್ಯದಲ್ಲೇ ಪ್ರಸಿದ್ಧವಾಗಿರುವ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆವರಣದಲ್ಲಿ ವಿಜಯದಶಮಿಯ ದಿನದಂದು ಪ್ರತೀ ವರ್ಷ ನಾಡಬಂದೂಕಿನೊಂದಿಗೆ, ಪಾಯಿಂಟ್‌ಗನ್‌ಗಳೂ ಆರ್ಭಟಿಸುತ್ತಿರುತ್ತವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ದೇವಾಲಯದ ಧರ್ಮದರ್ಶಿ ಮತ್ತು ಅವರ ಕುಟುಂಬಸ್ಥರು ಸೋಮವಾರ ಬೆಳಗ್ಗೆ ಇಂಬು ಹೊಡೆಯುವ ಪದ್ಧತಿ ಆಚರಿಸಿದ್ದು, ಈ ವೇಳೆ ಕೋವಿಯಲ್ಲದೇ ಪಾಯಿಂಟ್‌ಗನ್‌ಗಳಿಂದಲೂ ಗುಂಡು ಹಾರಿಸಿದ್ದಾರೆ ಎನ್ನಲಾದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಗನ್‌ಗಳು ಪರವಾನಿಗೆ ಹೊಂದಿವೆಯೇ ಅಥವಾ ಅನಧೀಕೃತ ಗನ್‌ಗಳೇ ಎಂಬುದು ತಿಳಿದು ಬಂದಿಲ್ಲ. ದೇವಾಲಯದ ಎದುರಿನ ರಸ್ತೆಯ ಬಳಿ ಮರಳಿನ ಮೂಟೆಗಳನ್ನು ಜೋಡಿಸಿಟ್ಟು ಅವುಗಳತ್ತ ಧರ್ಮದರ್ಶಿ ಸೇರಿದಂತೆ ಅವರ ಕುಟುಂಬಸ್ಥರು, ಮಹಿಳೆಯರು ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ. ಈ ವೇಳೆ ಧರ್ಮದರ್ಶಿ ಹಾಗೂ ಅವರ ಸಹೋದರರು ಪಾಯಿಂಟ್ ಗನ್‌ಗಳಿಂದ ಗುಂಡು ಹಾರಿಸಿರುವುದು ವಿಡಿಯೋಗಳಲ್ಲಿ ಕಂಡು ಬರುತ್ತಿದೆ. ಗುಂಡು ಹಾರಿಸುತ್ತಿದ್ದ ವೇಳೆ ಅಕ್ಕಪಕ್ಕ ಭಾರೀ ಸಂಖ್ಯೆಯಲ್ಲಿ ಜನರು ಸೇರಿರುವುದು ವೀಡಿಯೊದಲ್ಲಿ ಕಂಡುಬಂದಿದೆ.

ದೇವಾಲಯದಲ್ಲಿ ವಿಜಯದಶಮಿಯನ್ನು ಪ್ರತೀ ವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ವೇಳೆ ಪ್ರತೀ ವರ್ಷ ನಾಡಬಂದೂಕು ಹಾಗೂ ಪಾಯಿಂಟ್‌ಗನ್‌ಗಳಿಂದ ಗುಂಡಿನ ಮಳೆಸುರಿಸಲಾಗುತ್ತಿದೆ ಎನ್ನಲಾಗಿದೆ. ಇದನ್ನು ಸ್ಥಳೀಯ ಪೊಲೀಸರಾಗಲೀ, ಜಿಲ್ಲಾಡಳಿತವಾಗಲೀ ಪ್ರಶ್ನಿಸುವ ಗೋಜಿಗೆ ಇದುವರೆಗೂ ಹೋಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂಪ್ರದಾಯದ ಹೆಸರಿನಲ್ಲಿ ಬಂದೂಕುಗಳನ್ನು ಹೀಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾರಿಸಲು ಪೊಲೀಸ್ ಇಲಾಖೆ ಅನ್ನಪೂರ್ಣೇಶ್ವರಿ ದೇವಾಲಯದ ಮುಖ್ಯಸ್ಥರ ಕುಟುಂಬಕ್ಕೆ ಅನುಮತಿ ನೀಡಿದೆಯೇ? ಎಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಲೆನಾಡಿನಲ್ಲಿ ವಿಜಯದಶಮಿ ಹಬ್ಬದ ಸಂದರ್ಭ ಅಂಬುಹೊಡೆಯುವ ಪದ್ಧತಿ ಆಚರಣೆಯಲ್ಲಿದೆ. ಈ ವೇಳೆ ಕೆಲವರು ನಾಡಕೋವಿಗಳನ್ನು ಬಳಸುತ್ತಾರೆ ಇನ್ನೂ ಕೆಲವರು ಬಾಣ ಬಿಲ್ಲು ಬಳಸಿ ಗುರಿ ಹೊಡೆಯುವ ಆಚರಣೆ ಚಾಲ್ತಿಯಲ್ಲಿದೆ. ಇಂತಹ ಸಂದರ್ಭ ರಿವಾಲ್ವರ್‌ಗಳನ್ನು ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೊರನಾಡು ದೇವಾಲಯದ ಆವರಣದಲ್ಲಿ ರವಿವಾರ ಅಂಬು ಹೊಡೆಯಲು ರಿವಾಲ್ವರ್ ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದು ಕ್ರಮವಹಿಸಲಾಗುವುದು.
-ರಾಜು, ಡಿವೈಎಸ್ಪಿ, ಕೊಪ್ಪ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News