ಶಿವಮೊಗ್ಗ: ಪ್ರೈವೇಟ್ ಎಂಪ್ಲಾಯ್‌ಮೆಂಟ್ ಬ್ಯೂರೋ ರಜತ ಸಂಭ್ರಮ

Update: 2020-10-26 17:50 GMT

ಶಿವಮೊಗ್ಗ(ಅ.26): ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ ಏಳು ತಿಂಗಳಿಂದ ವೇತನ ಮಂಜೂರು ಆಗಿಲ್ಲ ಎಂಬ ವಿಚಾರಕ್ಕೆ ಗಮನಕ್ಕೆ ಬಂದಿದ್ದು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ ನೀಡಿದರು.

ಪ್ರೈವೇಟ್ ಎಂಪ್ಲಾಯ್‌ಮೆಂಟ್ ಬ್ಯೂರೋ ರಜತ ಸಂಭ್ರಮ ಅಂಗವಾಗಿ ರವಿವಾರ ಏರ್ಪಡಿಸಿದ್ದ ನೂತನ ಕಟ್ಟಡ ಹಾಗೂ ಆಡಳಿತ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಪ್ರೈವೇಟ್ ಎಂಪ್ಲಾಯ್‌ಮೆಂಟ್ ಬ್ಯೂರೋ ಸಂಸ್ಥಾಪಕ ಡಾ.ಸುರೇಶ್ ಕೆ. ಬಾಳೆಗುಂಡಿ ಅವರು ವೇತನ ಮಂಜೂರು ಆಗದಿರುವ ವಿಷಯವನ್ನು ಈಶ್ವರಪ್ಪ ಗಮನಕ್ಕೆ ತಂದಾಗ, `ಸರಕಾರದ ಬೊಕ್ಕಸದಲ್ಲಿ ಹಣದ ಕೊರತೆ ಇಲ್ಲ. ಆದರೆ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ವೇತನ ಬಿಡುಗಡೆ ವಿಳಂಬವಾಗಿದೆ. ಬರುವ ದಿನಗಳಲ್ಲಿ ವೇತನ ಬಿಡುಗಡೆ ಸೂಕ್ತ ಕ್ರಮಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ತುಂಬಾ ವರ್ಷಗಳಿಂದ ಈ ಬ್ಯೂರೋ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಹಲವರಿಗೆ ಅನುಕೂಲವಾಗಿದ್ದು, ಶ್ಲಾಘನೀಯ. ಪ್ರಮಾಣಿಕವಾಗಿ ಕೆಲಸ ಮಾಡಿದ್ದರ ಫಲವಾಗಿ ಇಷ್ಟೊಂದು ಎತ್ತರವಾಗಿ ಬೆಳೆಯಲು ಸಾಧ್ಯವಾಗಿದೆ. ಬಾಳೇಗುಂಡಿ ಅವರು ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ತಮ್ಮನ್ನೂ ತೊಡಗಿಸಿಕೊಂಡಿದ್ದಾರೆ. ಇವರಿಂದ ಸಮಾಜಕ್ಕೆ ಹೆಚ್ಚಿನ ಸೇವೆ ಸಿಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಇಡಿಪಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಬ್ಯೂರೋ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ. ಮುಖ್ಯಮಂತ್ರಿಗಳಿಗೆ ಪೂರ್ವನಿಗದಿತ ಕಾರ್ಯಕ್ರಮಗಳು ಇದ್ದುದ್ದರಿಂದ ಆಗಮಿಸಲು ಸಾಧ್ಯವಾಗಲಿಲ್ಲ. ಆದರೆ, ಅವರೂ ಶುಭ ಹಾರೈಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, ಸಂಸ್ಥೆಯೊಂದಿಗೆ ಹಲವು ವರ್ಷಗಳ ಒಡನಾಟವಿದೆ. ಇದರಿಂದ ಸಮಾಜಕ್ಕೆ ಉತ್ತಮ ಸೇವೆ ಸಿಗುತ್ತಿದೆ. ಬರುವ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಶುಭ ಕೋರಿದರು.

ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಜಿಪಂ ಸದಸ್ಯ ಕೆ.ಈ. ಕಾಂತೇಶ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್, ಪಾಲಿಕೆ ಸದಸ್ಯ ಇ. ವಿಶ್ವಾಸ್ ಬಂದು ಶುಭ ಹಾರೈಸಿದರು.

2020-21ನೇ ಸಾಲಿಗೆ ಸುಮಾರು ಆರು ಸಾವಿರ ಜನ ಹೊರಗುತ್ತಿಗೆ ನೌಕರರನ್ನು ಒದಗಿಸಲು ಸರಕಾರದಿಂದ ಕಾರ್ಯಾದೇಶ ಬಂದಿದೆ. ಅದರಲ್ಲಿ ಬಹುಮುಖ್ಯವಾಗಿ ಮುರಾರ್ಜಿ ದೇಸಾಯಿ ಶಾಲೆ ಮತ್ತು ಹಾಸ್ಟೆಲ್‌ಗಳಿವೆ. ಕೊರೊನಾದಿಂದಾಗಿ ಶಾಲೆ, ಹಾಸ್ಟೆಲ್‌ಗಳು ತೆರೆಯದೇ ಇರುವುದರಿಂದ ನೌಕರರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ, ನಮ್ಮ ವ್ಯವಹಾರ ಕೂಡ ಶೇ.15-20ರಷ್ಟು ಕಡಿಮೆಯಾಗಿದೆ.
- ಸುರೇಶ್ ಬಾಳೆಗುಂಡಿ, ಸಂಸ್ಥಾಪಕರು, ಪ್ರೈವೇಟ್ ಎಂಪ್ಲಾಯ್‌ಮೆಂಟ್ ಬ್ಯೂರೋ, ಶಿವಮೊಗ್ಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News