ಹಿಂದುಳಿದ ವರ್ಗಗಳ ಪಾಲು ಕಸಿದುಕೊಂಡಿರುವ ಹಿಂದುತ್ವ

Update: 2020-10-27 06:33 GMT

ಸಾಧಾರಣವಾಗಿ ಕೋಮು ದ್ವೇಷದ ಮಾತುಗಳ ಮೂಲಕವೇ ಮಾಧ್ಯಮಗಳಲ್ಲಿ ಸುದ್ದಿಯಾಗುವ ಈಶ್ವರಪ್ಪ ಅವರು ಏಕಾಏಕಿ ಅದನ್ನು ಬಿಟ್ಟು ‘ಕುರುಬ ಸಮುದಾಯ’ ‘ಹಿಂದುಳಿದ ವರ್ಗ’ ಎಂಬಿತ್ಯಾದಿಯಾಗಿ ಮಾತನಾಡಲು ಶುರು ಹಚ್ಚಿದ್ದಾರೆಂದರೆ, ಬಿಜೆಪಿಯೊಳಗಿರುವ ಕೆಲವು ನಾಯಕರಿಗೆ ಈ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದಾರೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ತನ್ನನ್ನು ಬಿಜೆಪಿಯೊಳಗೆ ನಿರ್ಲಕ್ಷಿಸಲಾಗುತ್ತದೆ ಎಂದಾಗ ಇದೇ ಈಶ್ವರಪ್ಪನವರು ‘ಹಿಂದುಳಿದ ವರ್ಗದ ರಾಯಣ್ಣ ಬ್ರಿಗೇಡ್’ ಕಟ್ಟಿ ಬಿಜೆಪಿಯೊಳಗಿರುವ ನಾಯಕರಿಗೆ ಇರಿಸು ಮುರಿಸು ಮಾಡಿದ್ದರು. ಯಡಿಯೂರಪ್ಪ ಅವರ ಲಿಂಗಾಯತ ಲಾಬಿಗೆ ಪ್ರತಿಯಾಗಿ ಅವರು ರಾಯಣ್ಣ ಬ್ರಿಗೇಡ್‌ನ್ನು ಕಟ್ಟಿ ತನ್ನ ರಾಜಕೀಯ ಬಲವನ್ನು ವರಿಷ್ಠರಿಗೆ ಪ್ರದರ್ಶಿಸಿದ್ದರು. ತನ್ನನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಹೊರಟವರಿಗೆ ಸಣ್ಣ ಶಾಕ್ ನೀಡಿದ್ದರು.

ಸರಕಾರದಲ್ಲಿ ಸೂಕ್ತ ಸ್ಥಾನಮಾನ ಪಡೆದ ಬಳಿಕ ಬ್ರಿಗೇಡ್‌ನ್ನು ಬದಿಗಿಟ್ಟು ಮತ್ತೆ ಆರೆಸ್ಸೆಸ್ ಒಪ್ಪಿಸಿದ ಮುಸ್ಲಿಮ್ ದ್ವೇಷಿ ಹೇಳಿಕೆಗಳ ಮೂಲಕ ‘ಪ್ರಖರ ಹಿಂದುತ್ವವಾದಿ’ಯಾದರು. ಬಿಜೆಪಿ ಮೇಲ್ನೋಟಕ್ಕೆ ‘ಹಿಂದುತ್ವವಾದ’ದ ಮಾತುಗಳನ್ನಾಡುತ್ತದೆಯಾದರೂ, ಅಧಿಕಾರವನ್ನು ಹಂಚುವ ಸಂದರ್ಭದಲ್ಲಿ ಜಾತಿ ಮುನ್ನೆಲೆಗೆ ಬರುತ್ತದೆ. ಯಡಿಯೂರಪ್ಪರ ಬೆನ್ನಿಗೆ ಲಿಂಗಾಯತರಿದ್ದಾರೆ ಎನ್ನುವ ಕಾರಣದಿಂದಲೇ ಅವರು ಈವರೆಗೆ ಮುಖ್ಯಮಂತ್ರಿಯಾಗಿ ಉಳಿದಿದ್ದಾರೆ. ಇಲ್ಲವಾದರೆ ಅವರ ಸ್ಥಾನದಲ್ಲಿ ಸಂತೋಷ್ ವೀರಾಜಮಾನವಾಗಿ ಬಿಡುತ್ತಿದ್ದರು. ಈ ಹಿಂದೆ ಆಕಸ್ಮಿಕವಾಗಿ ಮುಖ್ಯಮಂತ್ರಿಯಾದ ಸದಾನಂದ ಗೌಡರು ಒಕ್ಕಲಿಗರ ಸಮಾವೇಶವೊಂದರಲ್ಲಿ ‘ನಾನು ಗೌಡ ಸಮುದಾಯಕ್ಕೆ ಸೇರಿರುವುದರಿಂದಲೇ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು’ ಎಂದು ಬಹಿರಂಗ ಸಭೆಯಲ್ಲೇ ಹೇಳಿಕೆ ನೀಡಿದ್ದರು. ವಿಪರ್ಯಾಸವೆಂದರೆ ಬಿಜೆಪಿಯಲ್ಲಿ ಬಲಾಢ್ಯ ಜಾತಿಗಳಾಗಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ತಮ್ಮ ಹಕ್ಕುಗಳನ್ನು ಪಡೆಯಲು ಯಶಸ್ವಿಯಾಗುತ್ತವೆಯಾದರೂ, ಬಿಜೆಪಿಯ ‘ಹಿಂದುತ್ವ’ವನ್ನು ನಂಬಿ ಮತ ಹಾಕುವ ದುರ್ಬಲ ಜಾತಿಗಳು ಅಧಿಕಾರ ಪಡೆದುಕೊಳ್ಳುವ ಸಂದರ್ಭದಲ್ಲಿ ಮತ್ತೆ ಹಿಂದುಳಿಯುತ್ತವೆ.

ಕುರುಬ ಸಮುದಾಯ ಮತ್ತು ಬಿಲ್ಲವ ಸಮುದಾಯಗಳೆರಡರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇತ್ತೀಚೆಗೆ ಹಿಂದುಳಿದವರ್ಗಗಳ ಬಗ್ಗೆ ಮತ್ತು ಕುರುಬ ಸಮುದಾಯದ ಬಲವರ್ಧನೆಯ ಕುರಿತು ಬಿಜೆಪಿ ಮುಖಂಡ ಈಶ್ವರಪ್ಪ ಎರಡು ಗಮನಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಅದರಲ್ಲಿ, ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಸಮೀಕ್ಷೆ ಅಥವಾ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ಜಾರಿಗೊಳಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ವರದಿ ಜಾರಿಗೊಳಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆದರಿಕೆ ನೀಡಿದ್ದರೆ, ಹೋರಾಟದ ಅಗತ್ಯವೇ ಇಲ್ಲ, ಜಾರಿಗೊಳಿಸಲು ಸರಕಾರ ಬದ್ಧವಾಗಿದೆ ಎಂದು ಸಚಿವ ಈಶ್ವರಪ್ಪ ಭರವಸೆ ನೀಡಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಆಯೋಜಿಸಿದ್ದ ಸಭೆಯಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಈ ಇಬ್ಬರು ನಾಯಕರು, ಜಾತಿ ಜನಗಣತಿಯ ಜಾರಿಯ ವಿಷಯದಲ್ಲಿ ಒಮ್ಮತದಿಂದ ಮಾತನಾಡಿದ್ದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

ಈಶ್ವರಪ್ಪ ನಿಜಕ್ಕೂ ಹಿಂದುಳಿದ ವರ್ಗಗಳ ಕುರಿತಂತೆ ಕಾಳಜಿಯನ್ನು ಹೊಂದಿದ್ದಾರೆಯೇ ಅಥವಾ ಅದನ್ನು ಬಳಸಿಕೊಂಡು ಮತ್ತೆ ಬಿಜೆಪಿಯೊಳಗಿರುವ ಮುಖಂಡರನ್ನು ‘ಬ್ಲಾಕ್‌ಮೇಲ್’ ಮಾಡಲು ಹೊರಟಿದ್ದಾರೆಯೇ ಎನ್ನುವುದನ್ನು ಕಾಲವೇ ಹೇಳಬೇಕು. ಯಾಕೆಂದರೆ, ಜಾತಿ ಜನಗಣತಿಯ ಕುರಿತಂತೆ ಈಗಾಗಲೇ ಬಿಜೆಪಿಯೊಳಗಿರುವ ಕೆಲವು ನಾಯಕರು ‘ಜಾತಿ ಜನಗಣತಿಯ ಅಗತ್ಯವೇ ಇರಲಿಲ್ಲ. ಇದರಿಂದ ಭಾರೀ ಹಣಪೋಲಾಗಿದೆ’ ಎಂದು ಆರೋಪಿಸಿದ್ದರು. ಆರೆಸ್ಸೆಸ್ ಅಂತೂ ಜಾತಿ ಜನಗಣತಿಯನ್ನು ಜಾರಚಿಗೊಳಿಸಲು ಮಾಡಲು ದೊಡ್ಡ ತಡೆಗೋಡೆಯಾಗಿದೆ. ‘ಬ್ರಾಹ್ಮಣ್ಯ ಪ್ರಧಾನವಾದ ಹಿಂದುತ್ವ’ವನ್ನು ಜಾರಿಗೊಳಿಸುವ ಮಹತ್ವದ ಹೊಣೆಗಾರಿಕೆಯನ್ನು ಹೊತ್ತಿರುವ ಆರೆಸ್ಸೆಸ್‌ಗೆ ಹಿಂದುಳಿದವರ್ಗದ ಸ್ಥಿತಿಗತಿಗಳನ್ನು ತಿಳಿಸುವ, ಆ ಮೂಲಕ ಮೀಸಲಾತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ದಾರಿ ತೆರೆದುಕೊಡುವ ‘ಜಾತಿ ಜನಗಣತಿ’ ಜಾರಿಗೊಳ್ಳುವುದು ಬೇಡವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಆರೆಸ್ಸೆಸ್ ತನ್ನ ರಾಜಕೀಯಕ್ಕೆ ಸದಾ ಬಳಸಿಕೊಂಡು ಬಂದಿರುವುದು ಕೂಡ ಹಿಂದುಳಿದ ವರ್ಗಗಳ ಜನರನ್ನೇ. ಈಗ ಹಿಂದುಳಿದ ವರ್ಗಗಳ ಒಕ್ಕೂಟ ಮುಂದಿಟ್ಟಿರುವ ಬೇಡಿಕೆ, ಆರೆಸ್ಸೆಸ್‌ಗೆ ನುಂಗಲಾರದ ತುತ್ತಾಗಿದೆ.

ಇದೇ ಸಂದರ್ಭದಲ್ಲಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಬೃಹತ್ ಸಮಾವೇಶ, ಪಾದಯಾತ್ರೆ ನಡೆಸುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವುದು ಎಷ್ಟರ ಮಟ್ಟಿಗೆ ಸಾಂವಿಧಾನಿಕ ಅನಂತರದ ವಿಷಯ. ಆದರೆ ಕುರುಬ ಸಮುದಾಯ ಇಂದಿಗೂ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದಕ್ಕೆ ಕಾರಣ ಯಾರು ? ಕುರುಬ ಸಮುದಾಯದಿಂದ ಬಂದ ಸಿದ್ದರಾಮಯ್ಯ ಈ ನಾಡಿನ ಮುಖ್ಯಮಂತ್ರಿಯಾಗಿ ಐದು ವರ್ಷ ಆಳಿದ್ದಾರೆ. ಈಶ್ವರಪ್ಪ ಉಪಮುಖ್ಯಮಂತ್ರಿಯಾಗಿ ಮಾತ್ರವಲ್ಲ, ಹಲವು ಬಾರಿ ಸಚಿವ ಸ್ಥಾನಗಳನ್ನು ಅನುಭಸಿದ್ದಾರೆ. ಈ ಸಂದರ್ಭದಲ್ಲಿ ಇವರೆಲ್ಲ ಕುರುಬ ಸಮುದಾಯವನ್ನು ಮೇಲೆತ್ತುವುದಕ್ಕೆ ತಮ್ಮ ಅಧಿಕಾರವನ್ನು ಬಳಸಿಕೊಂಡಿದ್ದರೆ ಇಂದು ಪಾದಯಾತ್ರೆ ಹಮ್ಮಿಕೊಳ್ಳುವ ಅಗತ್ಯ ಕಂಡು ಬರುತ್ತಿರಲಿಲ್ಲ. ತಮ್ಮದೇ ಸಮುದಾಯದ ಮತಗಳಿಂದ ಆಯ್ಕೆಯಾಗಿ, ಆರೆಸ್ಸೆಸ್‌ನ ಊಳಿಗಕ್ಕೆ ಇಳಿದರೆ ಕುರುಬ ಸಮುದಾಯ ಅಭಿವೃದ್ಧಿಗೊಳ್ಳುವುದಾದರೂ ಹೇಗೆ? ಈಗಲೂ ಹಿಂದುಳಿದ ವರ್ಗ ಮತ್ತು ಕುರುಬ ಸಮುದಾಯದ ಕುರಿತಂತೆ ಈಶ್ವರಪ್ಪ ಅವರ ಹೋರಾಟ ಎಲ್ಲಿಯವರೆಗೆ ಎನ್ನುವುದು ಪ್ರಶ್ನಾರ್ಹ. ಯಾಕೆಂದರೆ, ಈ ಹೋರಾಟದ ಬಲದಿಂದ ಬಿಜೆಪಿಯೊಳಗೆ ಅಧಿಕಾರವನ್ನು ಪಡೆದು, ಬಳಿಕ ‘ಆರೆಸ್ಸೆಸ್ ನನ್ನ ತಾಯಿ’ ಎಂದು ಹೇಳಿದರೆ ಅಚ್ಚರಿಯೇನೂ ಇಲ್ಲ. ಆರೆಸ್ಸೆಸ್ ಈಶ್ವರಪ್ಪ ಅವರನ್ನು ಬಳಸಿಕೊಂಡು ತನ್ನ ಕಾರ್ಯಸಾಧನೆಯನ್ನಷ್ಟೇ ಮಾಡಿದೆ. ‘ಕುರುಬ ಸಮುದಾಯ’ ಎಂದಾಕ್ಷಣ ‘ನಾವೆಲ್ಲ ಹಿಂದೂ-ಒಂದು’ ಎಂದು ಆರೆಸ್ಸೆಸ್ ನಾಯಕರು ಅವರ ಬಾಯಿ ಮುಚ್ಚಿಸುತ್ತಾರೆ.

ಕುರುಬ ಸಮುದಾಯದ ಸ್ಥಿತಿಗಿಂತ ಹೀನಾಯವಾಗಿದೆ ಕರಾವಳಿ ಭಾಗದ ಬಿಲ್ಲವರ ಸ್ಥಿತಿ. ಕುರುಬ ಸಮುದಾಯದಲ್ಲಿ ಕನಿಷ್ಠ ರಾಜ್ಯ ಮಟ್ಟದ ನಾಯಕರು, ಸಚಿವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬಿಲ್ಲವರಲ್ಲಿ ಅಷ್ಟೂ ಇಲ್ಲ. ಈ ಹಿಂದೆ ಕಾಂಗ್ರೆಸ್ ಕಾಲದಲ್ಲಿ ಬಿಲ್ಲವರು ಭೂಸುಧಾರಣೆಯ ಮೂಲಕ ಗೇಣಿಯ ಜೀತದಿಂದ ಮುಕ್ತರಾಗಿ ಭೂಮಿಯನ್ನು ಪಡೆದರು. ಬಿಲ್ಲವ ಸಮುದಾಯದಿಂದ ಬಂದ ಜನಾರ್ದನ ಪೂಜಾರಿಯವರನ್ನು ಕಾಂಗ್ರೆಸ್ ಕೇಂದ್ರ ಹಣಕಾಸು ಸಚಿವರನ್ನಾಗಿ ಮಾಡಿತು. ಆದರೆ ಬಿಲ್ಲವರ ಮತಗಳಿಂದಲೇ ಕರಾವಳಿಯಲ್ಲಿ ವಿಜಯವನ್ನು ತನ್ನದಾಗಿಸಿಕೊಂಡು ಬಂದಿರುವ ಬಿಜೆಪಿ, ಯಾವುದೇ ಬಿಲ್ಲವ ನಾಯಕನಿಗೆ ರಾಜ್ಯ ಮಟ್ಟದ, ರಾಷ್ಟ್ರಮಟ್ಟದ ಅಧಿಕಾರಗಳನ್ನು ನೀಡಿಲ್ಲ. ಕಾಂಗ್ರೆಸ್‌ನಲ್ಲಿ ಜನಾರ್ದನ ಪೂಜಾರಿ, ಬಂಗಾರಪ್ಪರಂತೆ ಬಿಜೆಪಿಯಲ್ಲಿ ಒಬ್ಬನೇ ಒಬ್ಬ ನಾಯಕ ಬೆಳೆಯಲಿಲ್ಲ ಅಥವಾ ಬೆಳೆಯದಂತೆ ಆರೆಸ್ಸೆಸ್ ವ್ಯವಸ್ಥಿತವಾಗಿ ನೋಡಿಕೊಂಡು ಬಂದಿದೆ.

ಹಿಂದುತ್ವದ ಹೆಸರಿನಲ್ಲಿ ಮೈತುಂಬಾ ಕ್ರಿಮಿನಲ್ ಕೇಸುಗಳನ್ನು ಜಡಿದುಕೊಂಡವರು ಬಿಲ್ಲವರು. ಆದರೆ ಅಧಿಕಾರ ಹಂಚುವ ಸಂದರ್ಭದಲ್ಲಿ ಅವರಿಗೆ ಸಿಕ್ಕ ಪಾಲು ಏನೇನೂ ಇಲ್ಲ. ‘ಬಿಲ್ಲವ ಸಮುದಾಯದ ಕುರಿತಂತೆ’ ಬಿಜೆಪಿಯ ಬಿಲ್ಲವ ನಾಯಕರು ಮಾತನಾಡಿದರೆ ‘ನಾವೆಲ್ಲ ಹಿಂದೂಗಳು’ ಎಂದು ಬಾಯಿ ಮುಚ್ಚಿಸಲಾಗುತ್ತದೆ ಅಥವಾ ಮುಂದಿನ ಚುನಾವಣೆಯಲ್ಲಿ ಅವರನ್ನು ಬದಿಗೆ ಸರಿಸಿ ಮಗದೋರ್ವನನ್ನು ತರಲಾಗುತ್ತದೆ. ಹೀಗೆ ಮೂಲೆಗುಂಪಾದ ನಾಯಕರು ಹಲವರಿದ್ದಾರೆ ಬಿಜೆಪಿಯಲ್ಲಿ. ಆ ಮೂಲಕ ಇಡೀ ಬಿಲ್ಲವ ಸಮುದಾಯವೇ ಮೂಲೆಗುಂಪಾಗಿದೆ. ಬಿಜೆಪಿಯೊಳಗಿರುವ ಕುರುಬ, ವಾಲ್ಮೀಕಿ ಸಮುದಾಯಗಳು ಇಂದು ತಮ್ಮ ಅಧಿಕಾರದ ಪಾಲಿಗಾಗಿ ಜೋರು ದನಿಯಲ್ಲಿ ಮಾತನಾಡುತ್ತಿವೆ. ಬಿಲ್ಲವರೂ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಸಮುದಾಯವನ್ನು ಸಂಘಟಿಸದೇ ಇದ್ದರೆ, ಶಾಶ್ವತವಾಗಿ ಬ್ರಾಹ್ಮಣ್ಯದ ಊಳಿಗಕ್ಕಷ್ಟೇ ಬಿಲ್ಲವ ಶಕ್ತಿ ಸೀಮಿತವಾಗಬೇಕಾಗುತ್ತದೆ. ನಾರಾಯಣಗುರುಗಳ ಹೆಸರಿನಲ್ಲಿ, ಅವರ ಹಳದಿ ಬಾವುಟದ ಕೆಳಗೆ ಸಂಘಟಿತರಾಗಿ ತಮ್ಮ ಅಸ್ತಿತ್ವವನ್ನು ಪ್ರಕಟಿಸುವುದಕ್ಕೆ ಇದು ಸೂಕ್ತ ಸಂದರ್ಭವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News