ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಾನೇ ಪ್ರಚಾರ ಮಾಡುವೆ: ಕಾಂಗ್ರೆಸ್ ಮುಖಂಡ ಪ್ರಕಾಶ್ ಹುಕ್ಕೇರಿ

Update: 2020-10-26 17:59 GMT

ಬೆಳಗಾವಿ, ಅ. 26: `ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸುರೇಶ ಅಂಗಡಿ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸಲು ಹಳ್ಳಿ ಹಳ್ಳಿಗೆ ತೆರಳಿ ಖುದ್ದು ನಾನೇ ಪ್ರಚಾರ ಮಾಡುವೆ' ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೊಸ ಬಾಂಬ್ ಸಿಡಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುರೇಶ್ ಅಂಗಡಿಯವರು ಇಂದು ನಮ್ಮೊಂದಿಗೆ ಇಲ್ಲ. ನಾನು ಮತ್ತು ಅವರ ಪಕ್ಷ ಬೇರೆ ಬೇರೆಯಾಗಿದ್ದರೂ ನಾವಿಬ್ಬರೂ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದೆವು. ಹೀಗಾಗಿ  ಅವರ ಕುಟುಂಬದವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಇದೇ ವೇಳೆ ಸ್ಪಷ್ಟಣೆ ನೀಡಿದರು.

`ನಮ್ಮ ಪಕ್ಷದ ಹೈಕಮಾಂಡ್ ನನ್ನ ವಿರುದ್ಧ ಅದೇನು ಕ್ರಮ ಕೈಗೊಳ್ಳುತ್ತದೆಯೋ ತೆಗೆದುಕೊಳ್ಳಲಿ. ಅದಕ್ಕೆ ನನ್ನ ಯಾವುದೇ ಅಭ್ಯಂತರವಿಲ್ಲ. ಅಂಗಡಿ ಕುಟುಂಬದವರು ಸ್ಪರ್ಧಿಸಿದರೆ ನಾನು ಪಕ್ಷವನ್ನು ನೋಡುವುದಿಲ್ಲ. ನನ್ನ ಮಗನ ಚುನಾವಣೆ ಹೇಗೆ ಮಾಡಿದ್ದೇನೆಯೋ ಅದೇ ರೀತಿ ಅವರಿಗೂ ಸಹಕಾರ ನೀಡುತ್ತೇನೆ' ಎಂದು ಪ್ರಕಾಶ್ ಹುಕ್ಕೇರಿ ಹೇಳಿದರು.

ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹಕ್ಕೇರಿ ಚಿಕ್ಕೋಡಿ-ಸದಲಗ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದು, ಶಾಸಕರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿರುವ ಪ್ರಕಾಶ್ ಹುಕ್ಕೇರಿ ಇದೀಗ ಬಿಜೆಪಿ ಸೇರ್ಪಡೆ ಚಿಂತನೆ ನಡೆಸಿದ್ದಾರೆಂಬುದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಅಂಗಡಿ ಕುಟುಂಬದ ಪರ ಪ್ರಚಾರ ಇಚ್ಛೆ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರು, ಹಿರಿಯರಾದ ಪ್ರಕಾಶ್ ಹುಕ್ಕೇರಿ ಕಾಂಗ್ರೆಸ್ ಪಕ್ಷದಲ್ಲಿದ್ದು ಬಿಜೆಪಿ ಪರವಾಗಿ ಹೇಳಿಕೆ ನೀಡುವುದು, ಸುರೇಶ್ ಅಂಗಡಿ ಕುಟುಂಬದ ಗೆಲುವಿಗೆ ಶ್ರಮಿಸುವೆ ಎಂದು ಹೇಳಿರುವುದು ಅವರಿಗೆ ಶೋಭೆಯಲ್ಲ. ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿದ್ದು, ಇದೀಗ ಪಕ್ಷದ ವಿರುದ್ಧವೇ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News