ಸಾಲು ರಜೆಗಳ ಹಿನ್ನೆಲೆ: ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು

Update: 2020-10-26 18:09 GMT

ಚಿಕ್ಕಮಗಳೂರು, ಅ.26: ಪ್ರಾಕೃತಿಕ ಸೌಂದರ್ಯದ ಬೀಡು, ಧಾರ್ಮಿಕರ ಕ್ಷೇತ್ರಗಳ ತವರೂರಾಗಿರುವ ಕಾಫಿನಾಡಿನಲ್ಲಿ ಕಳೆದ ಮೂರು ದಿನಗಳಿಂದ ಪ್ರವಾಸಿಗರ ದಂಡು ನೆರೆದಿದೆ. ಸತತ ಮೂರು ದಿನಗಳ ಕಾಲ ಸರಕಾರಿ ರಜೆಯ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಇರುವ ಪ್ರವಾಸಿತಾಣಗಳು ಹಾಗೂ ಧಾರ್ಮಿಕ ಯಾತ್ರಾ ಸ್ಥಳಗಳು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ತುಂಬಿ ತುಳುಕುತ್ತಿದ್ದಾರೆ.

ಶನಿವಾರದಿಂದ ಸೋಮವಾರದವರೆಗೆ ಜಿಲ್ಲೆಯಾದ್ಯಂತ ಎಲ್ಲಿ ನೋಡಿದರಲ್ಲಿ ಹಬ್ಬದ ಸಡಗರ ಕಂಡುಬರುತ್ತಿದ್ದು, ಸಾಲು ರಜೆಗಳ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳ ಪ್ರವಾಸಿಗರು ಜಿಲ್ಲೆಯತ್ತ ಮುಖ ಮಾಡಿದ್ದರಿಂದ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಭಾರೀ ಜನಜಂಗುಳಿ, ವಾಹನಗಳ ಸಾಲು ಕಂಡು ಬಂತು. 

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಬಾಬಾಬುಡನ್‍ಗಿರಿ, ಮೈದಾಡಿ, ಸಿರಿಮನೆ ಫಾಲ್ಸ್, ಸಗೀರ್ ಫಾಲ್ಸ್, ಚಾರ್ಮಾಡಿ ಘಾಟ್, ಕುದುರೆಮುಖದಂತಹ ಪ್ರಾಕೃತಿಕ ಸೌಂದರ್ಯ ತಾಣಗಳು ಹಾಗೂ ಕಳಸ, ಶೃಂಗೇರಿ, ಹೊರನಾಡಿನಂತಹ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಕಳೆದ ಮೂರು ದಿನಗಳಿಂದ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ದೌಡಾಯಿಸಿದ್ದು, ಸೋಮವಾರವೂ ಈ ತಾಣಗಳಲ್ಲಿ ಪ್ರವಾಸಿಗರು, ಭಕ್ತರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಪ್ರವಾಸಿಗರಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ವ್ಯಾಪಾರ, ವಹಿವಾಟುಗಳು ಬಿರುಸಿನಿಂದ ನಡೆದಿದೆ. 

ನಗರದ ಐಜಿ ರಸ್ತೆ ಪ್ರವಾಸಿಗರ ವಾಹನಗಳಿಂದ ತುಂಬಿದ್ದ ದೃಶ್ಯಗಳು ಕಂಡುಬಂದವು. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಗೆ ಕಳೆದ ಮೂರು ದಿನಗಳಿಂದ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದು, ಮುಳ್ಳಯ್ಯನಗಿರಿ ಸುತ್ತಮುತ್ತಲಿನ ರೆಸಾರ್ಟ್, ಹೋಮ್ ಸ್ಟೇಗಳ ಆವರಣ ಪ್ರವಾಸಿಗರಿಂದ ತುಂಬಿಕೊಂಡಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಇನ್ನು ಕಾಫಿನಾಡಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ದೂರದ ನಗರಗಳ ಪ್ರವಾಸಿಗರು, ಕಂಪೆನಿಗಳ ಉದ್ಯೋಗಿಗಳು ರಾಯಲ್ ಎನ್‍ಫೀಲ್ಡ್, ಬುಲೆಟ್, ಹಾರ್ಲಿ ಡೇವಿಡ್‍ಸನ್‍ನಂತಹ ಬೈಕ್‍ಗಳ ಮೂಲಕ ಜಾಲಿ ರೈಡ್ ಮಾಡುತ್ತಿದ್ದು, ಮುಳ್ಳಯ್ಯನಗಿರಿ, ಕುದುರೆಮುಖ, ಶಂಗೇರಿಯಂತಹ ಪ್ರಾಕೃತಿಕ ಸೌಂದರ್ಯಗಳಿಗೆ ಬೈಕ್‍ಗಳ ಮೂಲಕ ಟೂರ್ ಮಾಡುತ್ತಿದ್ದಾರೆ. ಕಾಫಿನಾಡಿನ ಅಂಕುಡೊಂಕಿನ ರಸ್ತೆಗಳಲ್ಲಿ ಇಂತಹ ಬೈಕ್‍ಗಳ ಪ್ರವಾಸಿಗರು ಸಾಲಾಗಿ ಸಾಗುವ ದೃಶ್ಯಗಳು ಕಳೆದ ಮೂರು ದಿನಗಳಿಂದ ಸಾಮಾನ್ಯವಾಗಿದ್ದು, ದುಬಾರಿ ಬೈಕ್‍ಗಳ ಆಕರ್ಷಕ ಸದ್ದು, ಬೈಕ್ ರೈಡಿಂಗ್ ನೋಡುಗರ ಮನಸೂರೆಗೊಳ್ಳುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News