×
Ad

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಎಸಿಬಿಗೆ ದೂರು

Update: 2020-10-27 17:36 IST

ಬೆಂಗಳೂರು, ಅ.27: ತಾವು ಸಿಎಂ ಆಗಿದ್ದಾಗ ಕೆಪಿಎಸ್‍ಸಿ ಮೂಲಕ ಸಾಕಷ್ಟು ಜನರಿಗೆ ಉದ್ಯೋಗ ಕೊಡಿಸಲಾಗಿತ್ತು ಎಂದು ಹೇಳಿಕೆ ನೀಡಿದ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ನಗರದ ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಲಿಖಿತ ದೂರು ಸಲ್ಲಿಸಿದ್ದಾರೆ.

ಎಸಿಬಿ ಮುಖ್ಯಸ್ಥರಾದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಸಲ್ಲಿಸಿರುವ ದೂರಿನಲ್ಲಿ, ಎಚ್‍ಡಿಕೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಎಸ್‍ಸಿ ಅಧ್ಯಕ್ಷರ ಮೂಲಕ ಹಲವರಿಗೆ ಹುದ್ದೆ ಕೊಡಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರದ ವೇಳೆ ಸ್ವತಃ ಅವರೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರು ತಾವು ಮುಖ್ಯ ಮಂತ್ರಿಯಾಗಿದ್ದಾಗ ಕೆಪಿಎಸ್‍ಸಿ ನೇಮಕಾತಿಯಲ್ಲಿ ಪುಟ್ಟಣ್ಣ ಕಡೆಯವರಿಗೆ ಕ್ಲಾಸ್ ಒನ್ ಹುದ್ದೆ ಕೊಡಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ 1999-2000 ಅವಧಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಕೃಷ್ಣ ಇದ್ದ ಸಂದರ್ಭದಲ್ಲಿ, ನೂರಾರು ಮಂದಿಗೆ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಹುದ್ದೆ ಕೊಡಿಸಲು ನೆರವು ನೀಡಿದ್ದಾಗಿ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಎಚ್‍ಡಿಕೆ ಅವರ ಹೇಳಿಕೆ ಪ್ರಕಟವಾಗಿದೆ.

ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಹಾಗೂ ಸಾರ್ವಜನಿಕ ಹುದ್ದೆಯಲ್ಲಿ ಇದ್ದಂತಹ ವ್ಯಕ್ತಿ ಸರಕಾರಿ ನೇಮಕಾತಿಯಲ್ಲಿ ಪ್ರಭಾವ ಬೀರಿರುವುದು ಕಾನೂನು ಬಾಹಿರ. ಜತೆಗೆ ಭ್ರಷ್ಟಾಚಾರ ತಡೆ ಕಾಯ್ದೆ-1998ರ ಸೆಕ್ಷನ್ 8 ಮತ್ತು 9ರ ಉಲ್ಲಂಘನೆ. ಹೀಗಾಗಿ, ಎಚ್‍ಡಿಕೆ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಜಿ.ಬಿ ಅತ್ರಿ ಎಸಿಬಿ ಎಡಿಜಿಪಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News