ಬುಧವಾರ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ಮತದಾನ: ಚುನಾವಣಾ ಆಯೋಗದಿಂದ ಸಕಲ ಸಿದ್ಧತೆ
ಬೆಂಗಳೂರು, ಅ. 27: ವಿಧಾನ ಪರಿಷತ್‍ನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ನಾಳೆ(ಅ.28) ಬೆಳಗ್ಗೆ 7 ಗಂಟೆಯಿಂದ ನಡೆಯಲಿರುವ ಮತದಾನಕ್ಕೆ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಿದೆ.
ಆಡಳಿತರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪ್ರತಿಷ್ಠೆ ಮತ್ತು ಪೈಪೋಟಿ ಸೃಷ್ಟಿಸಿರುವ ಈ ಚುನಾವಣೆಯಲ್ಲಿ ಮೂರು ಪಕ್ಷಗಳ ಘಟಾನುಘಟಿಗಳು ಸೇರಿದಂತೆ ಒಟ್ಟು 40 ಮಂದಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ.
ಪರಿಷತ್ತಿನ ಆಗ್ನೇಯ ಪದವೀಧರ, ಪಶ್ಚಿಮ ಪದವೀಧರ, ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆಗೆ ಮತದಾನ ನಡೆಯಲಿದ್ದು, ಮತದಾನಕ್ಕಾಗಿ ಒಟ್ಟು 549 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಲ್ಲಿ ಮಹಿಳೆಯರು, ಪುರುಷರು ಸೇರಿದಂತೆ ಒಟ್ಟು 2,34,718 ಮತದಾರರಿದ್ದಾರೆ. ಈ ಕ್ಷೇತ್ರಗಳ ವ್ಯಾಪ್ತಿಗೆ ಬರುವ ತಾಲೂಕು ಕೇಂದ್ರಗಳಲ್ಲಿ ಮತಗಟ್ಟೆಗಳನ್ನು ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಚುನಾವಣಾ ಸಿಬ್ಬಂದಿ ವಿವಿಪ್ಯಾಟ್, ಮತಯಂತ್ರಗಳೊಂದಿಗೆ ಆಯಾ ಮತಗಟ್ಟೆಗಳಿಗೆ ತೆರಳಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಿದ್ದಾರೆ.
ಕ್ಷೇತ್ರಗಳು: ಬೆಂಗಳೂರು ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಬೆಂಗಳೂರು ನಗರ, ಬೆಂ.ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಶಿಕ್ಷಕರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಪುರಷರು-7,946, ಮಹಿಳೆಯರು-14,140 ಹಾಗೂ ಇತರೆ 3 ಸೇರಿದಂತೆ ಒಟ್ಟು 22,089 ಮತದಾರರಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರ ವ್ಯಾಪ್ತಿಗೆ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಪದವೀಧರರು ಮತದಾರರಾಗಿದ್ದಾರೆ. ಪುರುಷರು-68,411, ಮಹಿಳೆಯರು-40,712 ಹಾಗೂ ಇತರೆ 4 ಸೇರಿದಂತೆ ಒಟ್ಟು 1,09,127 ಮತದಾರರಿದ್ದಾರೆ.
ಈಶಾನ್ಯ ಶಿಕ್ಷಕ ಕ್ಷೇತ್ರ ವ್ಯಾಪ್ತಿಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಶಿಕ್ಷಕರು ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಶಿಕ್ಷಕರು ಮತ ಚಲಾಯಿಸುವ ಅರ್ಹತೆ ಹೊಂದಿದ್ದು, ಈ ಕ್ಷೇತ್ರದಲ್ಲಿ ಒಟ್ಟು 28,234 ಮತದಾರರಿದ್ದಾರೆ. ಇನ್ನು ಪಶ್ಚಿಮ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಯ ಪದವೀಧರರು ಮತದಾರರಾಗಿದ್ದು, ಈ ಕ್ಷೇತ್ರದಲ್ಲಿ ಒಟ್ಟು 74,268 ಮತದಾರರಿದ್ದು, ಅವರಿಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್‍ನ ಚೌಡಾರೆಡ್ಡಿ ತೂಪಲ್ಲಿ, ಕಾಂಗ್ರೆಸ್‍ನ ರಮೇಶ್ ಬಾಬು, ಬಿಜೆಪಿಯ ಚಿದಾನಂದಗೌಡ ಸೇರಿದಂತೆ ಒಟ್ಟು 15 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ವಿ.ಸಂಕನೂರ, ಕಾಂಗ್ರೆಸ್‍ನ ಕುಬೇರಪ್ಪ, ಜೆಡಿಎಸ್ ಬೆಂಬಲಿತ ಪಕ್ಷೇತರ ಸದಸ್ಯ ಬಸವರಾಜ ಗುರಿಕಾರ ಸೇರಿದಂತೆ 11 ಮಂದಿ ಅಖಾಡದಲ್ಲಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಪುಟ್ಟಣ್ಣ, ಜೆಡಿಎಸ್‍ನ ಎ.ಪಿ.ರಂಗನಾಥ್, ಕಾಂಗ್ರೆಸ್‍ನ ಪ್ರವೀಣ್ ಪೀಟರ್ ಸಹಿತ 9 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶರಣಪ್ಪ ಮಟ್ಟೂರ, ಬಿಜೆಪಿಯ ಸುಶೀಲ್ ನಮೋಶಿ ಹಾಗೂ ಜೆಡಿಎಸ್‍ನ ತಿಮ್ಮಯ್ಯ ಪುರ್ಲೆ ಸೇರಿ ಐದು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರಜ್ಞಾವಂತ ಮತದಾರರು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲಿದ್ದಾರೆ.
ಬಿಗಿ ಬಂದೋಬಸ್ತ್: ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಮತದಾನ ನಡೆಯುವ ಜಿಲ್ಲೆಗಳಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಜತೆಗೆ ಮತಗಟ್ಟೆಯ ಸುತ್ತ ಕಲಂ 144ರ ಅನ್ವಯ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಅಲ್ಲದೆ, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಎಡಗೈ ತೋರು ಬೆರಳಿಗೆ ಶಾಹಿ: ವಿಧಾನ ಪರಿಷತ್ತಿನ ನಾಲ್ಕೂ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಮತದಾರರಿಗೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿ ಹಾಕಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.