ಎಫ್‍ಐಆರ್ ದಾಖಲಿಸುವ ಮೊದಲೇ ಶೋಧ ಕಾರ್ಯ ನಡೆಸಲು ಪೊಲೀಸರಿಗೆ ಅವಕಾಶವಿದೆ: ಹೈಕೋರ್ಟ್

Update: 2020-10-27 13:37 GMT

ಬೆಂಗಳೂರು, ಅ.27: ಅಪರಾಧ ನಡೆಯುವ ಬಗ್ಗೆ ಸುಳಿವು ಸಿಕ್ಕಾಗ ಮೊದಲು ಪೊಲೀಸರು ಅಪರಾಧ ತಡೆಯುವ ಕೆಲಸ ಮಾಡುವುದು ಮುಖ್ಯವೇ ಹೊರತು, ಎಫ್‍ಐಆರ್ ದಾಖಲಿಸುತ್ತಾ ಕೂರುವುದಲ್ಲ ಎಂದು ಡ್ರಗ್ಸ್ ದಂಧೆ ಪ್ರಕರಣ ಒಂದರಲ್ಲಿ ಹೈಕೋರ್ಟ್ ತೀರ್ಪು ನೀಡಿದೆ.

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲಿನಲ್ಲಿರುವ ಕೇರಳದ ಕಣ್ಣೂರು ಮೂಲದ ತಸ್ಲೀಮ್, ಹಸೀಬ್, ರಾಝಿಕ್ ಅಲಿ ಎಂಬುವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಈ ಆದೇಶ ಪ್ರಕಟಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದಿಸಿದ್ದ ವಕೀಲರು, ಪೊಲೀಸರು ಮಾಹಿತಿ ಸಿಕ್ಕ ನಂತರ ದಾಳಿ ಮಾಡಿದ್ದೇವೆ ಎಂದಿದ್ದಾರೆ. ಆದರೆ ಮಾಹಿತಿ ಸಿಕ್ಕ ಕೂಡಲೇ ಎಫ್‍ಐಆರ್ ದಾಖಲಿಸಬೇಕಿತ್ತು. ಆದರೆ, ಪೊಲೀಸರು ಎಫ್‍ಐಆರ್ ದಾಖಲಿಸದೇ ದಾಳಿ ನಡೆಸಿದ್ದಾರೆ. ಮಾದಕ ವಸ್ತು ಪ್ರಮಾಣವೆಷ್ಟು ಎಂಬುದರ ಬಗ್ಗೆ ಎಫ್‍ಎಸ್‍ಎಲ್ ನಿಗದಿತ ಅವಧಿಯಲ್ಲಿ ವರದಿ ನೀಡಿಲ್ಲ. ಹೀಗಾಗಿ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಸರಕಾರದ ಪರ ವಾದಿಸಿದ್ದ ವಕೀಲರು, ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳ ಮನೆಯಲ್ಲಿ ಮಾದಕ ವಸ್ತು ಲಭ್ಯವಾಗಿದೆ, ಪೊಲೀಸರು ಸೀಝ್ ಸೇರಿ ಎಲ್ಲ ಪ್ರಕ್ರಿಯೆಯನ್ನು ನಿಯಮಾನುಸಾರವೇ ನಡೆಸಿದ್ದಾರೆ. ಲಭ್ಯವಾದ ಮಾದಕ ವಸ್ತುಗಳನ್ನು ಕೊರೋನ ಸೋಂಕಿನ ಕಾರಣ ಕ್ಕಾಗಿ ತಕ್ಷಣವೇ ಎಫ್‍ಎಸ್‍ಎಲ್‍ಗೆ ಕಳುಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಎಫ್‍ಎಸ್‍ಎಲ್ ವರದಿ ಸಿಗುವುದು ತಡವಾಗಿದೆ. ಆರೋಪಿಗಳು ದಂಧೆಯಲ್ಲಿ ಭಾಗಿಯಾಗಿದ್ದು, ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.

ವಕೀಲರ ವಾದ ಆಲಿಸಿದ್ದ ನ್ಯಾಯಪೀಠವು ಅಪರಾಧ ನಡೆದು ಹೋಗಿದ್ದಾಗ ಆ ಕುರಿತು ಮಾಹಿತಿ ಸಿಕ್ಕ ತಕ್ಷಣ ತಡ ಮಾಡದೆ ಎಫ್‍ಐಆರ್ ದಾಖಲಿಸುವುದು ಪೊಲೀಸರ ಕರ್ತವ್ಯ. ಆದರೆ, ಅಪರಾಧ ನಡೆಯುತ್ತಿದೆ ಅಥವಾ ನಡೆಯಲಿದೆ ಎಂಬ ರಹಸ್ಯ ಮಾಹಿತಿ ಸಿಕ್ಕಾಗ, ಆ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಅದನ್ನು ತಡೆಯುವುದು ಅಥವಾ ಕ್ರಮ ಜರುಗಿಸುವುದು ಮುಖ್ಯವಾಗುತ್ತದೆಯೇ ವಿನಃ ಮೊದಲೇ ಎಫ್‍ಐಆರ್ ದಾಖಲಿಸುತ್ತಾ ಕೂರುವುದಲ್ಲ. ಹೀಗಾಗಿ, ಪೊಲೀಸರು ಎಫ್‍ಐಆರ್ ದಾಖಲಿಸದೇ ದಾಳಿ ನಡೆಸಿ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಸರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗೆಯೇ, ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದೆ.

ಪ್ರಕರಣವೇನು: ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಿಟಿಎಂ 2ನೆ ಹಂತದಲ್ಲಿರುವ ಮಾರುತಿ ಡೆಂಟಲ್ ಕಾಲೇಜು ಹಿಂಭಾಗದ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೇರಳದ ಕಣ್ಣೂರಿನ 6 ಮಂದಿ ಯುವಕರು ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದಾಗ ಬಂಧಿಸಿದ್ದರು. ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಮಾದಕ ವಸ್ತುಗಳನ್ನು ಪಶಪಡಿಸಿಕೊಂಡಿದ್ದರು. ಇವರಲ್ಲಿ ಮೂವರು ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News