ಕೇರಳ ಮಾದರಿಯ ಹಿಂದೂ ಕಾರ್ಯಕರ್ತರ ಹತ್ಯೆ ಪರಂಪರೆಗೆ ನಾಂದಿ ಹಾಡಿದ್ದೇ ನಿಮ್ಮ ಸರಕಾರ

Update: 2020-10-27 14:29 GMT

ಬೆಂಗಳೂರು, ಅ.27: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಆಡಳಿತಾರೂಢ ಬಿಜೆಪಿ ತನ್ನ ವಾಗ್ದಾಳಿಯನ್ನು ಮುಂದುವರಿಸಿದ್ದು, ಟಿಪ್ಪು ಸುಲ್ತಾನ್ ಜಯಂತಿಯನ್ನು ಮುಂದಿಟ್ಟುಕೊಂಡು ಟೀಕಾ ಪ್ರಹಾರ ನಡೆಸಿದೆ.

ಸಿದ್ದರಾಮಯ್ಯ, ಸರ್ವ ಧರ್ಮೀಯರ ವಿರೋಧದ ನಡುವೆಯೂ ಜಿದ್ದಿಗೆ ಬಿದ್ದು ಟಿಪ್ಪು ಜಯಂತಿಯನ್ನು ಆಚರಿಸಿದಿರಿ. ಟಿಪ್ಪು ಗಲಭೆಯಲ್ಲಿ ಕಾಂಗ್ರೆಸ್ ಸೃಷ್ಟಿಸಿದ ಗಲಭೆಕೋರರಿಂದ ಕೊಲ್ಲಲ್ಪಟ್ಟ ಕುಟ್ಟಪ್ಪ ಅವರು ಕಾಲು ಜಾರಿ ಬಿದ್ದು ಮೃತರಾಗಿದ್ದು ಎಂದು ತೇಪೆ ಹಚ್ಚಿದ ನಿಮ್ಮನ್ನು ರಾಜ್ಯದ ಜನತೆ ಕ್ಷಮಿಸುವರೇ? ಎಂದು ಬಿಜೆಪಿ ಟೀಕಿಸಿದೆ.

ಸಿದ್ದರಾಮಯ್ಯ, ನಿಮ್ಮ ಅವಧಿಯಲ್ಲಿ ಹಿಂದೂಗಳ ಹತ್ಯೆಯಾಗುತ್ತಿದ್ದರೂ ಜಾಣ ಮೌನ ವಹಿಸಿದ್ದಿರಿ. ರಾಜ್ಯದಲ್ಲಿ ಕೇರಳ ಮಾದರಿಯ ಹಿಂದೂ ಕಾರ್ಯಕರ್ತರ ಹತ್ಯೆ ಪರಂಪರೆಗೆ ನಾಂದಿ ಹಾಡಿದ್ದೇ ನಿಮ್ಮ ಸರಕಾರ. 25ಕ್ಕೂ ಹೆಚ್ಚು ಹಿಂದೂ ಕಾಯಕರ್ತರ ಹತ್ಯೆಯಾಗಿದ್ದರೂ ಹತ್ಯಾ ರಾಜಕಾರಣವನ್ನು ಬೆಂಬಲಿಸಿದ್ದೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯ, ಹಿಂದೂ ಕಾರ್ಯಕರ್ತರ ಕೊಲೆಗಳಾಗುತ್ತಿದ್ದರೂ ನೀವು ಕುರ್ಚಿ ಭದ್ರಪಡಿಸುವುದರಲ್ಲಿಯೇ ನಿರತರಾಗಿದ್ದಿರಿ. ಸಮಾಜ ಘಾತುಕರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಎಸ್‍ಡಿಪಿಐ, ಪಿಎಫ್‍ಐ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದಿರಿ. ಹೆಣಗಳ ಮೇಲೆ ಟಿಪ್ಪು ದರ್ಬಾರು ನಡೆಸಿದರಲ್ಲವೇ? ಎಂದು ಬಿಜೆಪಿ ಟೀಕಿಸಿದೆ.

ಸಿದ್ದರಾಮಯ್ಯ, ಡಿ.ಜೆ.ಹಳ್ಳಿ ಗಲಭೆಯ ನಂತರ ನೀವು ಹಿಂದೂ ಮುಸ್ಲಿಂ ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದ್ದಿರಿ. ಗಲಭೆ ಮಾಡಿ ದಲಿತ ಶಾಸಕನ ಮನೆ ಸುಟ್ಟಿದ್ದು ಯಾರು ಎಂಬುದು ಎಲ್ಲರಿಗೂ ತಿಳಿದಿತ್ತು, ಆದರೂ ನೀವು ಹಿಂದೂ ಸಮಾಜಕ್ಕೆ ಬುದ್ಧಿ ಹೇಳಿದ್ದು ಯಾವ ಸೀಮೆಯ ನ್ಯಾಯ? ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯ, ಕುಖ್ಯಾತ ಪಿಎಫ್‍ಐ, ಕೆಎಫ್‍ಡಿ, ಎಸ್‍ಡಿಪಿಐ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ, 170 ಕ್ಕೂ ಹೆಚ್ಚು ಪ್ರಕರಣಗಳನ್ನು ವಾಪಾಸ್ ಪಡೆದಿರಿ. ನಿಮ್ಮ ಈ ನಿರ್ಧಾರದಿಂದ ರಾಜ್ಯದಲ್ಲಿ ಸಮಾಜಘಾತುಕರಿಗೆ ಬಲಿಯಾದ ಹಿಂದೂ ಕಾರ್ಯಕರ್ತರ ಹೆತ್ತ ತಾಯಿಯರ ಶಾಪ ನಿಮಗೆ ತಟ್ಟದೆ ಇದ್ದೀತೆ? ಎಂದು ಬಿಜೆಪಿ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News