ಸಿಎಂ ಬಿಎಸ್‍ವೈ ಕುಟುಂಬ ಜೆಸಿಬಿಯಲ್ಲಿ ಹಣ ದೋಚುತ್ತಿದೆ: ಸಿದ್ದರಾಮಯ್ಯ

Update: 2020-10-27 14:38 GMT

ಬೆಂಗಳೂರು, ಅ.27: ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಮಗ, ಮೊಮ್ಮಗ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದ್ದು, ಜೆಸಿಬಿಯಲ್ಲಿ ಹಣ ದೋಚುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಂಗಳವಾರ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಯಶವಂತಪುರ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಮತಯಾಚನೆ ಮಾಡಿದ ಅವರು, ಬಿಜೆಪಿ ಹಿಂದುಳಿದವರು, ದಲಿತರು, ಬಡವರು, ಅಲ್ಪಸಂಖ್ಯಾತರ ಪರ ಇರುವ ಪಕ್ಷ ಅಲ್ಲ. ಈ ವರ್ಗದ ಬಗ್ಗೆ ಕಾಳಜಿ ಇರುವುದು ಕಾಂಗ್ರೆಸ್‍ಗೆ ಮಾತ್ರ ಎಂದರು.

ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ನೆಮ್ಮದಿ ನೆಲೆಯೂರಬೇಕಾದರೆ, ಕ್ರಿಮಿನಲ್ ಚಟುವಟಿಕೆಗಳು ಅಂತ್ಯವಾಗಬೇಕಾದರೆ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಬೀಳಬೇಕು ಎಂದಾದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಅವರಿಗೆ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.

ಮುನಿರತ್ನ ಶಾಸಕರಾದ ಮೇಲೆ ಕ್ಷೇತ್ರದ ಮತದಾರರು ನೆಮ್ಮದಿ ಕಳೆದುಕೊಂಡಿದ್ದಾರೆ. ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಮತದಾರರಿಗೆ ಮುನಿರತ್ನ ನಾನಾ ಆಮಿಷ ಒಡ್ಡುತ್ತಿದ್ದಾರೆ. ಕೇಬಲ್ ಕನೆಕ್ಷನ್ ಕೊಡಿಸುತ್ತಿದ್ದಾರೆ. ಮತದಾರರ ಗುರುತಿನ ಚೀಟಿ ಪಡೆದು ಒಬ್ಬೊಬ್ಬರಿಗೆ ಎರಡು ಸಾವಿರ ರೂಪಾಯಿ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ಮತದಾರರಿಗೆ ಹಂಚಲು ಮುನಿರತ್ನ ಅವರಿಗೆ ಹಣ ಎಲ್ಲಿಂದ ಬಂತು. ಅದು ಲೂಟಿ ಹೊಡೆದ ಹಣ. 50 ಕೋಟಿ ರೂ.ಗಳಿಗೆ ಅವರು ಬಿಜೆಪಿಗೆ ಮಾರಾಟವಾಗಿದ್ದಾರೆ. ಲೂಟಿಕೋರರಿಗೆ ಮತದಾರರು ಅವಕಾಶ ಮಾಡಿಕೊಡಬಾರದೆಂದು ಕಳಕಳಿಯ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.

ನಾನು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎನ್ನುತ್ತಾರೆ ಮುನಿರತ್ನ. ಅನುದಾನ ಕೊಟ್ಟವರು ಯಾರು. ಈ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿದ್ದು ಹಿಂದೆ ಇದ್ದ ಕಾಂಗ್ರೆಸ್ ಸರಕಾರ ಎಂಬುದನ್ನು ಮತದಾರರು ಮರೆಯಬಾರದು. ಮುನಿರತ್ನ ಅವರು ಈ ಹಿಂದೆ ಅಮಿತ್ ಶಾ ಅವರನ್ನು ಬಾಯಿಗೆ ಬಂದಂತೆ ಟೀಕಿಸುತ್ತಿದ್ದರು. ಈಗ ಶಾ ಕಾಲಿಗೆ ಬೀಳುತ್ತಿದ್ದಾರೆ. ಕ್ರಿಮಿನಲ್ ಚಟುವಟಿಕೆಯಲ್ಲಿ ಪಳಗಿರುವ ಅದರಲ್ಲಿಯೇ ಮುಳುಗಿ ಹೋಗಿರುವ ವ್ಯಕ್ತಿ ಶಾಸಕರಾಗಬೇಕೇ ಅಥವಾ ಸುಸಂಸ್ಕೃತ ಹೆಣ್ಣು ಮಗಳು ಕುಸುಮಾ ಆಯ್ಕೆಯಾಗಬೇಕೇ ಎಂಬುದನ್ನು ಮತದಾರರೇ ನಿರ್ಧರಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ನಸೀರ್ ಅಹಮದ್ ಸೇರಿದಂತೆ ಮತ್ತಿತರರು ಪ್ರಚಾರದಲ್ಲಿ ಭಾಗಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News