ಮೌಲ್ಯಮಾಪನ ಮುಗಿದ 2 ಗಂಟೆಯಲ್ಲೇ ಫಲಿತಾಂಶ ಪ್ರಕಟ: ಹೊಸ ದಾಖಲೆ ನಿರ್ಮಿಸಿದ ದಾವಣಗೆರೆ ವಿವಿ

Update: 2020-10-27 15:01 GMT

ದಾವಣಗೆರೆ, ಅ.27: ಕೊರೋನ ವೈರಸ್ ನಿಂದ ಎದುರಾದ ಹಲವು ಸಂಕಷ್ಟ, ಅಡೆತಡೆಗಳ ನಡುವೆಯೂ ದಾವಣಗೆರೆ ವಿಶ್ವವಿದ್ಯಾನಿಲಯವು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸಿದೆ. ಅಲ್ಲದೆ ಮೌಲ್ಯಮಾಪನ ಮುಗಿದ ಕೇವಲ 2 ಗಂಟೆಯಲ್ಲೇ ಫಲಿತಾಂಶ ಪ್ರಕಟಿಸಿ ಹೊಸ ದಾಖಲೆ ನಿರ್ಮಿಸಿದೆ.

ದಾವಣಗೆರೆ ವಿಶ್ವವಿದ್ಯಾನಿಲಯವು ಸಪ್ಟೆಂಬರ್ 14ರಿಂದ ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಏರ್ಪಡಿಸಿತ್ತು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂತಿಮ ವರ್ಷದ ಜೊತೆಗೆ ಹಿಂಬಾಕಿ ಪತ್ರಿಕೆಗಳಿಗೂ ಪರೀಕ್ಷೆ ನಡೆಸಿತ್ತು. ಅಕ್ಟೋಬರ್ 23ಕ್ಕೆ ಎಲ್ಲ ಪರೀಕ್ಷೆಗಳು ಮುಗಿದು, ಫಲಿತಾಂಶಗಳನ್ನೂ ಪ್ರಕಟಿಸಲಾಗಿದೆ. ಪರೀಕ್ಷೆ ಮುಗಿದ 48 ಗಂಟೆಗಳಲ್ಲಿ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿದ್ದು, ಇದಾಗಿ ಎರಡು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿದ್ದು ಗಮನಾರ್ಹ. ರಾಜ್ಯದ ವಿಶ್ವವಿದ್ಯಾನಿಲಯಗಳ ಮಟ್ಟಿಗೆ ಇದೊಂದು ದಾಖಲೆಯಾಗಿದೆ.

''ಯುಜಿಸಿ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ದಾವಣಗೆರೆ ವಿಶ್ವವಿದ್ಯಾನಿಲಯವು ಸಂಕಷ್ಟದ ಸಂದರ್ಭದಲ್ಲೂ ಕಡಿಮೆ ಅವಧಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿದೆ. ಎಲ್ಲ ನಿಕಾಯಗಳ, ಎಲ್ಲ ವಿಭಾಗಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿಕೊಟ್ಟು, ಅರ್ಹರು ಭವಿಷ್ಯದ ದಾರಿ ಕಂಡುಕೊಳ್ಳಲು ಸಹಾಯವಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ನಿರೀಕ್ಷೆಗೂ ಮೀರಿ ಯಶಸ್ಸು ಪಡೆದಿದೆ'' ಎಂದು ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್. ಅನಿತಾ ಹೇಳಿದ್ದಾರೆ. 

ಸ್ನಾತಕೋತ್ತರ ಅಧ್ಯಯನ ಪರೀಕ್ಷೆಗೆ ಒಟ್ಟು 2,211 ವಿದ್ಯಾರ್ಥಿಗಳು ಹಾಜರಾಗಿದ್ದು, ಸರಾಸರಿ ಶೇ.95ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ನಿಕಾಯದಲ್ಲಿ 707, ವಾಣಿಜ್ಯ ನಿಕಾಯದಲ್ಲಿ 871 ಮತ್ತು ಕಲಾ ನಿಕಾಯದಲ್ಲಿ 633 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ವಿಶ್ವವಿದ್ಯಾನಿಲಯದಲ್ಲಿ ಈ ಬಾರಿ ಅಂತಿಮ ವರ್ಷದ ಸ್ನಾತಕ ಪರೀಕ್ಷೆಗೆ ಒಟ್ಟು 44,651 ವಿದ್ಯಾರ್ಥಿಗಳು ಹಾಜರಾಗಿದ್ದು, ಸರಾಸರಿ ಶೇ.72ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ ಕಲಾ ವಿಭಾಗದಲ್ಲಿಶೇ 86, ವಾಣಿಜ್ಯ ವಿಭಾಗದಲ್ಲಿ ಶೇ 79ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ ಶೇ.62ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಭೌತವಿಜ್ಞಾನ ವಿಷಯದಲ್ಲಿ ಬಹುತೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರಿಂದ ಫಲಿತಾಂಶದ ಪ್ರಮಾಣ ಕಡಿಮೆಯಾಗಿದೆ ಎಂದು ಪ್ರೊ. ಎಚ್.ಎಸ್. ಅನಿತಾ ತಿಳಿಸಿದ್ದಾರೆ. 

ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 121 ಕಾಲೇಜುಗಳು ಹಾಗೂ ಒಂದು ಸಂಯೋಜಿತ ಕಾಲೇಜು ಇದೆ. ಸ್ನಾತಕ ಪದವಿಯಲ್ಲಿ ಕಲೆ, ವಿಜ್ಞಾನ, ವಾಣಿಜ್ಯ, ಬಿಬಿಎ, ಬಿಬಿಎಂ, ಬಿಸಿಎ, ಬಿಇಡಿ, ಬಿವಿಎ, ಬಿಎಸ್ಪಿ ಹಾಸ್ಪಿಟಾಲಿಟಿ, ಬಿಪಿಇಡಿ, ಬಿಎಸ್‍ಡಬ್ಲು ವಿಭಾಗದಲ್ಲಿ ಪ್ರತ್ಯೇಕ ಪರೀಕ್ಷೆ ನಡೆದಿವೆ. ಇನ್ನು ಸ್ನಾತಕೋತ್ತರ ಪದವಿಯಲ್ಲಿ 4 ನಿಕಾಯಗಳ 25 ವಿಭಾಗಗಳಲ್ಲೂ ಏಕಕಾಲಕ್ಕೆ ಪರೀಕ್ಷೆ ನಡೆಸಲಾಗಿದೆ.

ಪರೀಕ್ಷೆ ನಡೆದ ತಕ್ಷಣ ಪತ್ರಿಕೆಗಳನ್ನು ಮೌಲ್ಯಮಾಪನ ಕೇಂದ್ರಕ್ಕೆ ರವಾನಿಸಲಾಗಿತ್ತು. ಪತ್ರಿಕೆಗಳು ಕಚೇರಿ ಸೇರಿದ ತಕ್ಷಣ ಡಿಕೋಡಿಂಗ್ ಮಾಡಿ ಮೌಲ್ಯಮಾಪನಕ್ಕೆ ಒದಗಿಸಲಾಗುತ್ತಿತ್ತು. ಪರೀಕ್ಷೆಯ ಸಂದರ್ಭದಲ್ಲಿಯೇ ಪ್ರಾಯೋಗಿಕ ಪರೀಕ್ಷೆಯನ್ನೂ ಮಾಡಲಾಗಿದೆ. ಮೌಲ್ಯಮಾಪನ ಮುಗಿಸಿದ ನಂತರ ಉತ್ತರ ಪತ್ರಿಕೆಗಳನ್ನು ಡಿಕೋಡಿಂಗ್ ಮಾಡಿ, ದಾಖಲೆಗಳನ್ನು ಪರಿಶೀಲಿಸಿ, ಮತ್ತೊಮ್ಮೆ ಅವಲೋಕನ ಮಾಡಿ ಕೇವಲ ಎರಡು ಗಂಟೆಗಳಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ಉದಾಹರಣೆಗೆ ಎಂಎಸ್ಸಿ ಜೀವರಸಾಯನ ಶಾಸ್ತ್ರ ವಿಭಾಗದ ಪರೀಕ್ಷೆ ಸೆ.26ರಂದು ಮುಗಿದಿದ್ದು, ಮರುದಿನ ಪ್ರಾಧ್ಯಾಪಕರು ಮೌಲ್ಯಮಾಪನ ಮುಗಿಸಿದರು. ಅದೇ ದಿನ ಫಲಿತಾಂಶ ಪ್ರಕಟಿಸಲಾಗಿದೆ. 

ಆರೋಗ್ಯ ರಕ್ಷಣೆಗೂ ಆದ್ಯತೆ
ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಸಾಕಾರ ನೀಡಿ, ಉತ್ತಮ ಭವಿಷ್ಯಕ್ಕೆ ದಾರಿತೋರುವುದು ವಿಶ್ವವಿದ್ಯಾನಿಲಯದ ಆಶಯ. ಅದಕ್ಕಾಗಿಯೇ ಯುಜಿಸಿ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಿರೀಕ್ಷೆಗೂ ಮೀರಿ ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಫಲಿತಾಂಶ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳಿಗೆ ಫಲಿತಾಂಶದ ಜೊತೆಗೆ ಡಿಜಿಟಲ್‍ ಅಂಕಪಟ್ಟಿಯನ್ನೂ ಒದಗಿಸಿದ್ದು ವಿಶೇಷ.

ನಮಗೆ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಸರ್ಕಾರದ ಆದೇಶ ಪಾಲಿಸಬೇಕು ಎಂಬುದಷ್ಟೇ ಮುಖ್ಯವಾಗಿರಲಿಲ್ಲ. ಜೊತೆಗೆ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಆರೋಗ್ಯ ರಕ್ಷಣೆಯೂ ಅನಿವಾರ್ಯವಾಗಿತ್ತು. ಹೀಗಾಗಿ ಸುರಕ್ಷಿತ ಅಂತರ, ಕಡ್ಡಾಯ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗಿತ್ತು. ಪ್ರಾಧ್ಯಾಪಕರು ಕುಳಿತ ಸ್ಥಳಕ್ಕೆ ಉತ್ತರ ಪತ್ರಿಕೆಗಳನ್ನು ಪೂರೈಸಿ, ಮೌಲ್ಯಮಾಪನದ ನಂತರ ವಾಪಸ್‍ ಒಯ್ಯುವ ಮೂಲಕ ಅವರ ಆರೋಗ್ಯ ರಕ್ಷಣೆಗೆ ಒತ್ತು ನೀಡಿ, ಪರೀಕ್ಷಾ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಇದೆ. ಇದು ಸಮಾಧಾನದ ಸಂಗತಿ.
-ಪ್ರೊ.ಶರಣಪ್ಪ ವಿ. ಹಲಸೆ, ಕುಲಪತಿ

ದಾಖಲೆ ಅವಧಿಯಲ್ಲಿ ಫಲಿತಾಂಶ ಪ್ರಕಟ
ಕೋವಿಡ್-19 ಹರಡುವಿಕೆ ಪ್ರಮಾಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸವಾಲಿನ ಪ್ರಶ್ನೆಯಾಗಿತ್ತು. ಆರೋಗ್ಯ ಮತ್ತು ಭವಿಷ್ಯದ ವಿಚಾರ ಎದುರಾದಾಗ ಆಯ್ಕೆ ಕಷ್ಟವಾಗುತ್ತದೆ. ಇವುಗಳ ನಡುವೆ ಘಟಿಕೋತ್ಸವ ಆಚರಣೆಯೂ ಇತ್ತು. ಆದರೆ ಇವೆಲ್ಲವನ್ನೂ ಒಪ್ಪಿ ಸಮಸ್ಯೆಯನ್ನು ಮಾನ್ಯ ಕುಲಪತಿಗಳ ನಿರ್ದೇಶನದಲ್ಲಿ ಸರಳವಾಗಿ ನಿವಾರಿಸಿದ್ದಕ್ಕೆ ಸಮಾಧಾನವಿದೆ. ದಾಖಲೆಯ ಅವಧಿಯಲ್ಲಿ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸಿದ್ದು ಹೆಮ್ಮೆಯ ಸಂಗತಿ. ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡುವ ವಿಶ್ವವಿದ್ಯಾನಿಲಯವು ಪಾರದರ್ಶಕವಾಗಿ ಫಲಿತಾಂಶವನ್ನು ಪ್ರಕಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದು ಗಮನಾರ್ಹ.
-ಪ್ರೊ.ಎಚ್.ಎಸ್. ಅನಿತಾ, ಪರೀಕ್ಷಾಂಗ ಕುಲಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News