ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವಂತೆ ಕರ್ನಾಟಕ ಹೈಕೋರ್ಟ್ ಶಿಫಾರಸು

Update: 2020-10-27 16:55 GMT

ಬೆಂಗಳೂರು, ಅ. 27: ಸಾಮೂಹಿಕ ಅತ್ಯಾಚಾರದ ಕಾಯ್ದೆಯ ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಹಾಗೂ ಈಗಿರುವ ಜೀವಾವಧಿ ಹಾಗೂ ದಂಡದೊಂದಿಗೆ ಹೆಚ್ಚುವರಿಯಾಗಿ ಮರಣದಂಡನೆ ಸೇರಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಮಂಗಳವಾರ ಶಾಸಕಾಂಗ ಹಾಗೂ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.

2012ರಲ್ಲಿ ನಡೆದ ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ 7 ಆರೋಪಿಗಳಿಗೆ ಜಾರಿಗೊಳಿಸಲಾದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದು ಬಿ. ವೀರಪ್ಪ ಹಾಗೂ ಕೆ. ನಟರಾಜನ್ ಅವರನ್ನೊಳಗೊಂಡ ನ್ಯಾಯಪೀಠ ಈ ಶಿಫಾರಸು ಮಾಡಿದೆ.

ಸ್ವಾತಂತ್ರ್ಯ ದೊರಕಿ 7 ದಶಕಗಳ ಬಳಿಕವೂ ಭಾರತದಲ್ಲಿ ಮಹಿಳೆಯರು ಇನ್ನು ಕೂಡ ಅಪಾಯದಲ್ಲಿ ಇರುವುದರ ಬಗ್ಗೆ ನ್ಯಾಯ ಪೀಠ ವಿಷಾದ ವ್ಯಕ್ತಪಡಿಸಿತು. ‘‘ಮಧ್ಯರಾತ್ರಿ ಮಹಿಳೆಯೋರ್ವರು ಸ್ವತಂತ್ರವಾಗಿ ನಡೆದುಕೊಂಡು ಹೋದ ದಿನ ನಮಗೆ ಸ್ವಾತಂತ್ರ್ಯ ದೊರಕಿತು ಎಂದು ಹೇಳಬಹುದು’’ ಎಂಬ ಮಹಾತ್ಮಾ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಮಹಾತ್ಮಾ ಗಾಂಧಿ ಅವರ ಕನಸನ್ನು ನನಸಾಗಿಸುವಲ್ಲಿ ನಮ್ಮ ಸಮಾಜ ವಿಫಲವಾಗಿದೆ ಎಂದಿತು. ‘‘ನಮ್ಮ ದೇಶದ ಮುಂದಿನ ಜನಾಂಗವನ್ನು ಕ್ಯಾನ್ಸರ್‌ಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಾಡುವ ಅತ್ಯಾಚಾರದ ಪಿಡುಗನ್ನು ನಿಗ್ರಹಿಸಲು ಶಾಸಕಾಂಗ/ಕಾರ್ಯಾಂಗ, ನ್ಯಾಯಾಂಗ, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಿಕೋದ್ಯಮ ಹಾಗೂ ಸಾಮಾನ್ಯ ಜನರು ಸಂಘಟಿತರಾಗಿ ಚಿಂತಿಸಬೇಕಾದ ಅಗತ್ಯ ಇದೆ’’ ಎಂದು ಆದೇಶದಲ್ಲಿ ಹೇಳಲಾಗಿದೆ.

ನ್ಯಾಯಪೀಠ ತನ್ನ ಕಟು ತೀರ್ಪಿನ ಮುಕ್ತಾಯದಲ್ಲಿ, ‘‘ನ್ಯಾಯಾಧೀಶರು ಸಾಮಾಜಿಕ ಪೋಷಕರು. ಸಮಾಜದ ಬಾಲಕಿಯರು, ಮಹಿಳೆಯರ ಮೇಲಿನ ನಮ್ಮ ಕಾಳಜಿಯನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಯಾರೊಬ್ಬರ ಮಗಳ ಮೇಲೆ ದಾಳಿ ನಡೆಸುವುದು, ಅವರು ಅವರ ಮಗಳ ಮೇಲೆ ದಾಳಿ ನಡೆಸಿದಂತೆ’’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News