ವಿನಾಯಕ ಬಾಳಿಗಾ ಕೊಲೆಗಡುಕರು ಯಾರೆಂದು ಕಟೀಲ್ ಅವರಲ್ಲಿ ಕೇಳಿ: ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

Update: 2020-10-27 16:24 GMT

ಬೆಂಗಳೂರು, ಅ. 27: `ಬ್ರಹ್ಮಾವರದ ಪ್ರವೀಣ್ ಪೂಜಾರಿ, ಬಂಟ್ವಾಳದ ಹರೀಶ್ ಪೂಜಾರಿ, ಸುರತ್ಕಲ್‍ನ ಪ್ರಕಾಶ್ ಮತ್ತು ಕೇಶವ ಶೆಟ್ಟಿ, ಕೊಡಗಿನ ರಾಜು ಕನ್ನಡದಾನೆ, ಚಿಕ್ಕಮಗಳೂರಿನ ಕಲ್ಲಪ್ಪ ಹಂಡಿಬಾಗ್, ಮೂಡಿಗೆರೆಯ ಧನ್ಯಶ್ರಿ, ವಿಜಯಪುರದ ದಾನಮ್ಮ ಹತ್ಯೆ ಮಾಡಿದವರು ಯಾರೆಂದು ನಳೀನ್ ಕುಮಾರ್ ಕಟೀಲ್, ಸಿ.ಟಿ.ರವಿ, ಬಿಜೆಪಿಯ ಸಂತೋಷ್ ಅವರನ್ನೊಮ್ಮೆ ಕೇಳಿ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, `ರಾಜ್ಯದಲ್ಲಿ ಹಿಂದೂಗಳ ಹತ್ಯೆ ಬಗ್ಗೆ ಲೆಕ್ಕ ಕೇಳುತ್ತಿರುವ ಬಿಜೆಪಿ ನಾಯಕರೇ, ಮೊದಲು ಮಂಗಳೂರಿನ ಹಿಂದು ಶ್ರದ್ಧಾಳು ವಿನಾಯಕ ಬಾಳಿಗಾ ಕೊಲೆಗಡುಕರು ಯಾರು ಎಂದು ನಿಮ್ಮ ಪಕ್ಷದ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರನ್ನು ಕೇಳಿ. ಅವರು ಉತ್ತರ ನೀಡಿದರೆ ನನಗೂ ತಿಳಿಸಿ' ಎಂದು ಆಕ್ರೋಶ ಹೊರ ಹಾಕಿದ್ದಾರೆ.

`ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ 25ಕ್ಕೂ ಹೆಚ್ಚು ಹಿಂದುಗಳ ಹತ್ಯೆಯಾಗಿದೆ ಎಂದು ಆರೋಪಿಸಿರುವ ಬಿಜೆಪಿ ಆ ಬಗ್ಗೆ ಲೆಕ್ಕ ಕೇಳಿದೆ. ಇಲ್ಲಿದೆ ಲೆಕ್ಕ. ಕಣ್ಣು ಬಿಟ್ಟು ಓದಿ. ನಿಮ್ಮದೇ ಪರಿವಾರದ ಹಿಂದು ಕಾರ್ಯಕರ್ತರನ್ನು ನಿಮ್ಮವರೇ ಹತ್ಯೆಗೈದದ್ದು ಯಾಕೆ ಎಂದು ಮೊದಲು ಉತ್ತರ ಕೊಡಿ' ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

`ರಾಜಕಾರಣಿಗಳು/ ಸಂಘಟನೆಗಳ ಮೇಲೆ ಪೊಲೀಸರು ದಾಖಲಿಸಿದ್ದ ಪ್ರಕರಣಗಳನ್ನು ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ವಾಪಸು ಪಡೆದಿದೆ. ಇದರ ವಿವರ ಕೇಳಿ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಎರಡು ತಿಂಗಳಾಗುತ್ತಾ ಬಂತು. ನಮ್ಮ ಕಾಲದ ಲೆಕ್ಕ ಕೇಳುವ ಬಿಜೆಪಿ ಮೊದಲು ಈ ಪತ್ರಕ್ಕೆ ಉತ್ತರ ಕೊಡಿಸಿ' ಎಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News