ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಚಾಮರಾಜೇಂದ್ರ ಮೃಗಾಲಯಕ್ಕೆ ರವಾನೆ

Update: 2020-10-27 16:48 GMT

ಮೈಸೂರು,ಅ.27: ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಿದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವನ್ನು ಇದೀಗ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಕರೆದೊಯ್ಯಲಾಗಿದೆ.

ಇದೇ ಮೊದಲ ಬಾರಿಗೆ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದ. ಅಭಿಮನ್ಯುವಿಗೆ ಕುಮ್ಕಿ ಆನೆಗಳಾದ ವಿಜಯ ಮತ್ತು ಕಾವೇರಿ ಸಾಥ್ ನೀಡಿದ್ದವು. ಗೋಪಿ ಮತ್ತು ವಿಕ್ರಮ ನೌಪತ್ ಆನೆಯಾಗಿ ಯಶಸ್ವಿ ಕಾರ್ಯ ನಿರ್ವಹಿಸಿದ್ದವು.

ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು ದಣಿದಿದ್ದ ಗಜನಾಯಕ ಅಭಿಮನ್ಯು ಮತ್ತು ಗೋಪಿಯನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ದಿಢೀರನೆ ಶಿಫ್ಟ್ ಮಾಡಲಾಗಿತ್ತು. ಜಂಬೂ ಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆಯೇ ಅಭಿಮನ್ಯುವನ್ನು ಮೃಗಾಲಯಕ್ಕೆ ಕರೆದೊಯ್ಯಲಾಯಿತು.

ಮೈಸೂರು ಮೃಗಾಲಯದಿಂದ ಹೊರಗೆ ಕಳುಹಿಸುತ್ತಿರುವ ತಾಯಿ ಮತ್ತು ಮರಿಯಾನೆಯನ್ನು ಶಿಫ್ಟ್ ಮಾಡುವ ಕಾರ್ಯಾಚರಣೆಗೆ ಅಭಿಮನ್ಯು ಮತ್ತು ಗೋಪಿಯನ್ನು ಬಳಸಿಕೊಳ್ಳಲಾಗಿತ್ತು. ತಾಯಿ ಮತ್ತು ಮರಿಯಾನೆಯನ್ನು ಇಂದು ಬೆಳಿಗ್ಗೆ ಲಾರಿಗೆ ಹತ್ತಿಸಿದ ನಂತರ ಅಭಿಮನ್ಯು ಮತ್ತು ಗೋಪಿಯನ್ನು ಮತ್ತೆ ಅರಮನೆ ಆವರಣಕ್ಕೆ ಕರೆ ತರಲಾಯಿತು. ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುವ ಮತ್ತು ಪಳಗಿಸುವ ತಂತ್ರಕ್ಕೆ ಅಭಿಮನ್ಯುವನ್ನು ಬಳಸಿಕೊಳ್ಳಲಿದ್ದು, ಅರಣ್ಯ ಇಲಾಖೆಯಲ್ಲಿ ಅಭಿಮನ್ಯು ಕೂಂಬಿಂಗ್ ಸ್ಪೆಶಲಿಸ್ಟ್ ಕಾರ್ಯ ನಿರ್ವಹಿಸುತ್ತಿದೆ.

ಉಳಿದಂತೆ ವಿಜಯ, ಕಾವೇರಿ ಮತ್ತು ವಿಕ್ರಮ ಆನೆಗಳು ಅರಮನೆ ಆವರಣದಲ್ಲಿ ರಿಲ್ಯಾಕ್ಸ್ ಮೂಡ್ ಗೆ ಜಾರಿವೆ. ಇವುಗಳಿಗೆ ಮಾವುತರು ಮತ್ತು ಕಾವಾಡಿಗಳು ಬಿಸಿ ನೀರು ಸ್ನಾನ ಮಾಡಿಸಿ ಪೌಷ್ಠಿಕಾಂಶಯುಕ್ತ ಆಹಾರ ನೀಡಿದ್ದಾರೆ. ಮೃಗಾಲಯದಿಂದ ಅರಮನೆಗೆ ಬಂದ ಕೂಡಲೇ ಅಭಿಮನ್ಯು ಮತ್ತು ಗೋಪಿಗೂ ಸ್ಪೆಷಲ್ ಫುಡ್ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News