ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ: ರೈತ, ದಲಿತ, ಪ್ರಗತಿಪರ ಸಂಘಟನೆಗಳ ಕರೆ

Update: 2020-10-27 16:53 GMT

ಬೆಂಗಳೂರು, ಅ.27: ರೈತ, ದಲಿತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ತಂದಿರುವ ಬಿಜೆಪಿ ಸರಕಾರಕ್ಕೆ ಉಪಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಬೇಕೆಂದು ಕರ್ನಾಟಕ ರೈತ, ದಲಿತ, ಕಾರ್ಮಿಕ ಚಳವಳಿಗಳು, ಪ್ರಗತಿಪರ ಸಂಘಟನೆಗಳ ಜಂಟಿ ವೇದಿಕೆ ಕರೆ ನೀಡಿದೆ.

ಮಂಗಳವಾರ ರೈತ, ಕಾರ್ಮಿಕ ಹಾಗೂ ಕಾರ್ಮಿಕ ಐಕ್ಯ ಹೋರಾಟ ವೇದಿಕೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕೋವಿಡ್ ಸೋಂಕಿನಿಂದ ಮೃತಪಟ್ಟ ಮಾರುತಿ ಮಾನ್ಪಡೆಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ನಾಯಕರು, ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆಯಲ್ಲಿ ಜನತೆ ವೋಟಿನ ರಾಜಕೀಯದ ಮೂಲಕ ಸರಿಯಾದ ಪ್ರತ್ಯುತ್ತರ ನೀಡಬೇಕೆಂದು ತಿಳಿಸಿದ್ದಾರೆ.

ರೈತ-ಕಾರ್ಮಿಕ ವಿರೋಧಿ ಬಿಜೆಪಿ ಸರಕಾರದ ವಿರುದ್ದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಐಕ್ಯ ಹೋರಾಟ ವೇದಿಕೆಯ ಕಾರ್ಯಕರ್ತರು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಹಾಗೆ ಎರಡು ಕ್ಷೇತ್ರಗಳಲ್ಲಿ ಸಭೆ, ಮೆರವಣಿಗೆಗಳ ಮೂಲಕ ಮತದಾರರನ್ನು ಜಾಗೃತಿಗೊಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಈ ಶ್ರದ್ಧಾಂಜಲಿ ಸಭೆಯಲ್ಲಿ ರೈತ ನಾಯಕ ಮಾರುತಿ ಮಾನ್ಪಡೆರವರ ರಾಜಿರಹಿತ ಹೋರಾಟದ ಬದುಕನ್ನು ಸ್ಮರಿಸಲಾಯಿತು. ಈ ವೇಳೆ ರೈತ ಮುಖಂಡ ಚಾಮರಸ ಮಾಲಿಪಾಟೀಲ್, ದಲಿತ ಮುಖಂಡರಾದ ಗುರುಪ್ರಸಾದ್ ಕರೆಗೋಡು, ಲಕ್ಷ್ಮಿನಾರಾಯಣ ನಾಗವಾರ, ಸಿಐಟಿಯುನ ಮಹಾಂತೇಶ್, ಭೂಮಿ ಮತ್ತು ವಸತಿ ಹಕ್ಕುಗಳ ಹೋರಾಟಗಾರ ಸಿರಿಮನೆ ನಾಗರಾಜ್, ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News