ಶ್ರೀಚಾಮುಂಡೇಶ್ವರಿ ದೇವಿಯ ರಥ ಎಳೆದು ಹರಕೆ ತೀರಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

Update: 2020-10-27 17:03 GMT

ಮೈಸೂರು,ಅ.27: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಾಡದೇವತೆ ತಾಯಿ ಶ್ರೀಚಾಮುಂಡೇಶ್ವರಿ ದೇವಿಯ ರಥ ಎಳೆದು ಹರಕೆ ತೀರಿಸಿದ್ದಾರೆ. ರೋಹಿಣಿ ಸಿಂಧೂರಿ ಅವರಿಗೆ ರಥ ಎಳೆಯಲು ತಂದೆ-ತಾಯಿ, ಪತಿ ಹಾಗೂ ಮಗು ಸಾಥ್ ನೀಡಿದೆ.

ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವುದು ಸರ್ಕಾರದ ನೀತಿ ನಿಯಮಗಳಿಗೆ ವಿರುದ್ಧ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಶರತ್ ಸಿಎಟಿ ಮೆಟ್ಟಿಲು ಹತ್ತಿದ್ದಾರೆ. ಸಿಎಟಿ ವಿಚಾರಣೆ ಇನ್ನೂ ನಡೆಸುತ್ತಿರುವ ಕಾರಣ ತೀರ್ಪು ನೀಡಿಲ್ಲ. ಇದರಿಂದ ರೋಹಿಣಿ ಸಿಂಧೂರಿ ಅವರ ಜಿಲ್ಲಾಧಿಕಾರಿ ಹುದ್ದೆ ತೂಗುಯ್ಯಾಲೆಯಲ್ಲಿದೆ.

ಸಿಎಟಿ ನನ್ನ ವರ್ಗಾವಣೆಯನ್ನು ವಜಾ ಮಾಡಲಿ ಅಥವಾ ಪುರಸ್ಕರಿಸಲಿ. ಆದರೆ ನಾನು ದಸರಾ ಮುಗಿಯುವ ತನಕ ಇದೇ ಹುದ್ದೆಯಲ್ಲಿರಬೇಕು. ನನ್ನ ಅಧಿಕಾರಾವಧಿಯಲ್ಲಿ ನಾಡಹಬ್ಬ ದಸರಾ ಸುಸೂತ್ರವಾಗಿ ನೆರವೇರಲಿ ಎಂದು ರೋಹಿಣಿ ಸಿಂಧೂರಿ ಅವರು ಚಾಮುಂಡೇಶ್ವರಿ ದೇವಿಗೆ ರಥ ಎಳೆಯುವ ಹರಕೆ ಹೊತ್ತಿದ್ದರು ಎನ್ನಲಾಗಿದೆ.

ದಸರಾ ಆರಂಭವಾದ ದಿನದಿಂದ ಜಂಬೂ ಸವಾರಿ ದಿನದ ತನಕ 10 ದಿನಗಳ ಅವಧಿಯಲ್ಲಿ ಪ್ರತಿದಿನ ರೋಹಿಣಿ ಸಿಂಧೂರಿ ಅವರು ರಥ ಎಳೆದಿದ್ದರು. ವಿಜಯ ದಶಮಿಯಾದ ನಿನ್ನೆಯೂ ಕೂಡ ಅವರು ಜಿಲ್ಲಾಧಿಕಾರಿಯಾಗಿಯೇ ಮುಂದುವರಿದಿದ್ದು ಧನ್ಯತಾ ಭಾವದೊಂದಿಗೆ ಚಾಮುಂಡೇಶ್ವರಿ ದೇವಿಯ ರಥ ಎಳೆದ ರೋಹಿಣಿ ಸಿಂಧೂರಿ ಶಕ್ತಿ ದೇವತೆಯ ಹರಕೆ ತೀರಿಸಿದ್ದರು.

ವಿಜಯ ದಶಮಿಯ ಜಂಬೂ ಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ಕುಟುಂಬ ಸಮೇತರಾಗಿ ಬಂದ ರೋಹಿಣಿ ಸಿಂಧೂರಿ ಅವರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ತಂದೆ-ತಾಯಿ, ಪತಿ ಹಾಗೂ ಮಗುವಿನೊಂದಿಗೆ ತಾಯಿ ಶ್ರೀಚಾಮುಂಡೇಶ್ವರಿ ಸನ್ನಿಧಿಗೆ ಬಂದು ದೇವಿಯ ರಥ ಎಳೆದು ಹರಕೆ ತೀರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News