ಅರಮನೆ ಮಂಡಳಿ ಉಪನಿರ್ದೇಶಕರ ವಿರುದ್ಧ ತನಿಖೆ ಆದೇಶ: ದಸಂಸ ಅನಿರ್ಧಿಷ್ಟಾವಧಿ ಧರಣಿ ಅಂತ್ಯ

Update: 2020-10-27 17:13 GMT

ಮೈಸೂರು,ಅ.27: ಅರಮನೆ ಮಂಡಳಿ ಉಪನಿರ್ದೇಶಕರ ಟಿ.ಎಸ್.ಸುಬ್ರಮಣ್ಯ ವಿರುದ್ಧ ತನಿಖೆಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ ಹಿನ್ನಲೆಯಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿದ್ದ ದಲಿತ ಸಂಘರ್ಷ ಸಮಿತಿ ಅನಿರ್ಧಿಷ್ಟಾವಧಿ ಧರಣಿ ಕೊನೆಗೂ ಅಂತ್ಯ ಕಂಡಿತು.

ಭ್ರಷ್ಟಾಚಾರದಲ್ಲಿ ತೊಡಗಿರುವ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ನಗರದ ಡಿಸಿ ಕಚೇರಿ ಮುಂಭಾಗ ಕಳೆದ ಒಂಬತ್ತು ದಿನಗಳಿಂದ ದಲಿತ ಸಂಘರ್ಷ ಸಮಿತಿ ಧರಣಿ ನಡೆಸುತ್ತಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿಗಳು ಇಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ವಿರುದ್ಧ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿ ಆದೇಶದ ಪ್ರತಿಯನ್ನು ನಮ್ಮ ಸಂಘಟನೆಗೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನಾ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ದಸಂಸ ಮುಖಂಡ ಕೆ.ವಿ.ದೇವೇಂದ್ರ ತಿಳಿಸಿದರು.

ಇದೇ ವೇಳೆ ಮಾತನಾಡಿದ ಅವರು ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ಆತನನ್ನು ವಜಾಗೊಳಿಸಿ ಅವನಿಂದ ಸರ್ಕಾರಕ್ಕೆ ಆಗಿರುವ ನಷ್ಟವನ್ನು ತುಂಬಿಸುವವರೆಗೂ ನಾವು ವಿರಮಿಸುವುದಿಲ್ಲ. ಟಿ.ಎಸ್.ಸುಬ್ರಮಣ್ಯನ ವಿರುದ್ಧ ನಾವು ಮಾಡಿರುವ ಆರೋಪ ಸತ್ಯವಾಗಿದ್ದು, ಅವನ ಭ್ರಷ್ಟಾಚಾರದ ಎಲ್ಲಾ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ. ಹಾಗಾಗಿ ಉಪವಿಭಾಗಾಧಿಕಾರಿಗಳು ಸಮರ್ಪಕವಾಗಿ ತನಿಖೆ ನಡೆಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಆತನ ಮೇಲೆ ಲೋಕಾಯುಕ್ತ ತನಿಖೆ ಕೂಡ ನಡೆಯುತ್ತಿದೆ. ಇನ್ನು ಜಿಲ್ಲಾಡಳಿತವೂ ತನಿಖೆಗೆ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಆತ ಅದೇ ಜಾಗದಲ್ಲಿ ಮುಂದುವರಿದರೆ ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆ ಹೆಚ್ಚಿದ್ದು, ಆತನನ್ನು ತನಿಖೆ ಮುಗಿಯುವವರೆಗೆ ಅರಮನೆ ಮಂಡಳಿ ಉಪನಿರ್ದೇಶಕರ ಹುದ್ದೆಯಿಂದ ಹೊರಗಿಡಬೇಕು ಎಂದು ನಾಳೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಎಡದೊರೆ ಮಹಾದೇವಯ್ಯ, ಕಿರಂಗೂರು ಸ್ವಾಮಿ, ಅರಸಿನಕೆರೆ ಶಿವರಾಜು, ಉಮಾಮಹಾದೇವ್, ಬೊಕ್ಕಳ್ಳಿ ಮಹದೇವಸ್ವಾಮಿ, ಶಿವಮೂರ್ತಿ ಶಂಕರಪುರ, ದೇವರಾಜ್ ಬಿಳಿಕೆರೆ, ಆಲತ್ತೂರು ಶಿವರಾಜ್, ರವಿಕುಮಾರ್ ಏಚಗಳ್ಳಿ, ರಂಗಸಮುದ್ರ ಆನಂದ್, ಬೊಮ್ಮನಹಳ್ಳಿ ಶಂಕರ್, ಅಣ್ಣಯ್ಯ ಪುರಂ, ವರುಣ ಮಹೇಶ್, ಸಂತೋಷ್ ಪಡುವಾರಹಳ್ಳಿ, ಬೊಮ್ಮೇನಹಳ್ಳಿ ಮಹದೇವ್, ರಂಗಸಮುದ್ರ ಪುಟ್ಟರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News