ಕಳವು ಪ್ರಕರಣ: 7 ಮಂದಿ ಬಂಧನ; 54 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2020-10-27 17:55 GMT

ಮಂಡ್ಯ, ಅ.27: ಕಳವು ಪ್ರಕರಣ ಸಂಬಂಧ 7 ಮಂದಿಯನ್ನು ಬಂಧಿಸಿರುವ ಪೊಲೀಸರು ಅವರಿಂದ ಮಂಡ್ಯ, ಮೈಸೂರು, ಹಾಸನ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಕಳವು ಮಾಡಲಾಗಿದ್ದ 54 ಲಕ್ಷ ರೂ. ಮೌಲ್ಯದ 160 ಕಂಪ್ಯೂಟರ್, 1 ಪ್ರಿಂಟರ್, 3 ಜೆರಾಕ್ಸ್ ಮಿಷನ್, 16 ಬ್ಯಾಟರಿ, 3 ಟಿ.ವಿ. 2 ಯುಪಿಎಸ್, 1 ವಾಷಿಂಗ್ ಮಿಷನ್, 1 ವೇಯಿಂಗ್ ಮಿಷನ್ ಹಾಗೂ ಬೆಂಗಳೂರು ನಗರದಲ್ಲಿ ಕಳವು ಮಾಡಲಾಗಿದ್ದ 6 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.

ನಾಗಮಂಗಲ ತಾಲೂಕಿನ ಚಾಕೇನಹಳ್ಳಿಯ ರವಿಕುಮಾರ್, ಮಂಡ್ಯ ತಾಲೂಕಿನ ಸೂನಗಹಳ್ಳಿಯ ಮಂಜುನಾಥ, ಎಸ್.ಪಿ.ನಾಗರಾಜು, ಹೇಮಂತ್‍ ಕುಮಾರ, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕಂಪ್ಯೂಟರ್ ವ್ಯಾಪಾರಿ ಎನ್.ವೈ.ರಾಮಕೃಷ್ಣ, ಅನ್ನಪೂರ್ಣೇಶ್ವರಿ ನಗರದ ಗಿಡದಕೊನ್ನೇನಹಳ್ಳಿಯ ಬಿ.ಜಿ.ವೆಂಕಟೇಶ್ ಹಾಗೂ ಮಂಡ್ಯ ನಗರದ ಸಾದಿಕ್ ಬಂಧಿತರು.

ಇದಲ್ಲದೆ ಆರೋಪಿಗಳಿಂದ ಕಳ್ಳತನಕ್ಕೆ ಉಪಯೋಗಿಸಿದ್ದ ಸ್ಕಾರ್ಪಿಯೋ ಕಾರು, ಬೊಲೇರೋ ಲಗೇಜ್ ವಾಹನ ಹಾಗೂ ಟಾಟಾ ಸುಮೋ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಮನಗರ ಜಿಲ್ಲೆಯಲ್ಲಿ 1, ಹಾಸನ ಜಿಲ್ಲೆಯಲ್ಲಿ 2, ತುಮಕೂರು ಜಿಲ್ಲೆಯಲ್ಲಿ 5, ಮೈಸೂರು ಜಿಲ್ಲೆಯಲ್ಲಿ 5, ಮಂಡ್ಯ ಜಿಲ್ಲೆಯಲ್ಲಿ 20 ಹಾಗೂ ಬೆಂಗಳುರು ನಗರ ಜಿಲ್ಲೆಯಲ್ಲಿ 1 ಪ್ರಕರಣ ಸೇರಿದಂತೆ ಒಟ್ಟು 34 ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು.

ಕಳೆದ ಆ.26ರಂದು ಮಂಡ್ಯ ಜಿಲ್ಲೆಯ ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿ.ಸಿ.ಫಾರಂ ಬಳಿ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ಗಳು, ಜೆರಾಕ್ಸ್ ಮಿಷನ್, ಬ್ಯಾಟರಿ, ಇತರೆ ವಸ್ತುಗಳನ್ನು ಕಳವು ಮಾಡಿದ ಸಂಬಂಧ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಗ್ರಾಮಾಂತರ ಸಿಪಿಐ ಮಹೇಶ್, ಶಿವಳ್ಳಿ ಠಾಣೆ ಪಿಎಸ್ಸೈ ಮಂಜುನಾರ್, ಕೆ.ಎಂ.ದೊಡ್ಡಿ ಠಾಣೆಯ ಪಿಎಸ್ಸೈ ಶೇಷಾದ್ರಿಕುಮರ್, ಹಲಗೂರು ಠಾಣೆಯ ಪಿಎಸ್ಸೈ ಪುರುಷೋತ್ತಮ್ ನೇತೃತ್ವದ ತಂಡವನ್ನು ರಚಿಸಲಾಗಿತ್ತು. ಪತ್ತೆ ತಂಡಕ್ಕೆ ನಗದು ಬಹುಮಾನ ಘೋಷಿಸಲಾಗಿದೆ ಎಂದು ಅವರು ತಿಳಿಸಿದರು.

ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಧನಂಜಯ, ಡಿವೈಎಸ್ಪಿ ನವೀನ್‍ಕುಮಾರ್, ಇತರ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

2 ಕೆ.ಜಿ. ಚಿನ್ನಾಭರಣ ವಂಚನೆ ಪ್ರಕರಣ ಸಿಐಡಿ ತನಿಖೆಗೆ
ಅಧಿಕ ಬಡ್ಡಿ ಆಸೆ ತೋರಿಸಿ ಚಿನ್ನ ಪಡೆದು ಹಲವು ಜನರಿಗೆ ವಂಚನೆ ಮಾಡಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ನಗರದ ನಿವಾಸಿ ಸೋಮಶೇಖರ್ ಅಲಿಯಾಸ್ ಸೋಮ ಎಂಬಾತನನ್ನು ಬಂಧಿಸಿ ಆತನಿಂದ 1,08,91,540 ರೂ. ಮೌಲ್ಯದ 2 ಕೆ.ಜಿ. ಚಿನ್ನಾಭರಣ ಹಾಗೂ ಇತರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಮತ್ತೊಬ್ಬ ಆರೋಪಿ ಪೂಜಾ ನಿಖಿಲ್ ಅವರನ್ನೂ ಬಂಧಿಸಲಾಗಿದೆ ಎಂದು ಎಸ್ಪಿ ಕೆ.ಪರುಶುರಾಂ ತಿಳಿಸಿದರು.

ಪ್ರಕರಣ 1 ಒಂದು ಕೋಟಿ ರೂ. ಮೌಲ್ಯ ಮೀರಿರುವುದರಿಂದ ಸಿಐಡಿ ತನಿಖೆಗೆ ಒಪ್ಪಿಸುವ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ವರದಿ ಒಪ್ಪಿಸಲಾಗಿದೆ. ಮತ್ತಷ್ಟು ಆರೋಪಿಗಳ ಬಂಧನ ಆಗಬೇಕಿದೆ. ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.

ಒಡವೆಗಳನ್ನು ಫೈನಾನ್ಸ್ ಕಂಪನಿಗಳು ಹಾಗೂ ಬ್ಯಾಂಕ್‍ಗಳಲ್ಲಿ ಅಡವಿಟ್ಟರೆ ಹೆಚ್ಚು ಬಡ್ಡಿ ದೊರೆಯುತ್ತದೆಂದು ಆಮಿಷ ತೋರಿ ಸೋಮಶೇಖರ್ ಒಡವೆಗಳನ್ನು ಪಡೆದುಕೊಂಡು ವಂಚನೆ ಮಾಡಿದ್ದಾನೆಂದು ಸೋನಿಯಾ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News