ವೇತನ ತಾರತಮ್ಯ ಖಂಡಿಸಿ ಪಿಎಸ್‍ಎಸ್‍ಕೆ ನೌಕರರ ಪ್ರತಿಭಟನೆ

Update: 2020-10-27 18:11 GMT

ಪಾಂಡವಪುರ, ಅ.27: ಪಿಎಸ್‍ಎಸ್‍ಕೆ ಗುತ್ತಿಗೆದಾರ ಮುರುಗೇಶ್ ಆರ್.ನಿರಾಣಿ ಸ್ಥಳೀಯ ನೌಕರರಿಗೆ ವೇತನ ತಾರತಮ್ಯ ಮಾಡುವ ಮೂಲಕ ಶೋಷಣೆ ಮಾಡುತ್ತಿದ್ದಾರೆಂದು ಆರೋಪಿಸಿ ನೂರಕ್ಕೂ ಹೆಚ್ಚು ನೌಕರರು ಪ್ರತಿಭಟನೆ ನಡೆಸಿದರು.

ಕಾರ್ಖಾನೆ ಆವರಣದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿ ಮುಂಭಾಗ ಜಮಾವಣೆಗೊಂಡ ನೌಕರರು ಕಾರ್ಖಾನೆ ಗುತ್ತಿಗೆದಾರ ಮುರುಗೇಶ್ ನಿರಾಣಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಿಂದ ಕರೆ ತಂದಿರುವ ನೌಕರರಿಗೆ 20 ರಿಂದ 25 ಸಾವಿರ ರೂ. ವೇತನ ನೀಡುತ್ತಿದ್ದು, ಸ್ಥಳೀಯ ನೌಕರರಿಗೆ ಕೇವಲ 4,500 ರೂ. ವೇತನ ನೀಡುತ್ತಿದ್ದಾರೆ. ಬೇರೆ ನೌಕಕರ ಸಮನಾಗಿ ನಾವು ಕೆಲಸ ಮಾಡುತ್ತಿದ್ದು, ನಮಗೆ ಮಾತ್ರ ಕಡಿಮೆ ವೇತನ ನೀಡಿ ಶೋಷಣೆ ಮಾಡಲಾಗುತ್ತಿದೆ. ಈ ಬಗ್ಗೆ ಕಾರ್ಖಾನೆ ಆಡಳಿತ ಮಂಡಳಿಯವರನ್ನು ಕೇಳಿದರೆ, ಇಷ್ಟ ಇದ್ದರೆ ಮಾಡಿ ಇಲ್ಲದಿದ್ದರೆ ಹೋಗಿ ಎನ್ನುತ್ತಾರೆ ಎಂದು ನೌಕರರು ಆರೋಪಿಸಿದರು.

ಸರಕಾರದ ನಿಯಮಾನುಸಾರ ನಮಗೆ ಕನಿಷ್ಠ 13 ಸಾವಿರ ರೂ. ವೇತನ ನೀಡಬೇಕು. ಆದರೆ, ಕಡಿಮೆ ವೇತನ ನೀಡಿ ಕಾರ್ಮಿಕ ಇಲಾಖೆಗೆ ಹೆಚ್ಚು ವೇತನ ನೀಡುತ್ತಿದ್ದೇವೆ ಎಂದು ಆಡಳಿತ ಮಂಡಳಿಯವರು ಸುಳ್ಳು ಹೇಳುತ್ತಿದ್ದಾರೆ. ನೌಕರರ ಈ ಬಗ್ಗೆ ಕಾರ್ಮಿಕ ಇಲಾಖೆಗೆ ಗೊತ್ತಿದ್ದರೂ ಅವರು ಸುಮ್ಮನಾಗಿದ್ದಾರೆ. ಯಾವುದೇ ಕಾರ್ಮಿಕ ಕಲ್ಯಾಣ ಅಧಿಕಾರಿಗಳು ನಮ್ಮ ಕಷ್ಟವನ್ನು ಕೇಳುತ್ತಿಲ್ಲ. ಅವರೂ ಸಹ ಇವರಿಂದ ಲಂಚ ತಿಂದು ಸುಮ್ಮನಾಗಿದ್ದಾರೆ ಎಂದು ಅವರು ಆರೋಪಿಸಿದರು.

ಸ್ಥಳೀಯ ನೌಕರರಿಗೆ ಅಗತ್ಯ ಸುರಕ್ಷಾ ಸಾಧನಗಳನ್ನು ನೀಡಿಲ್ಲ. ಶೂ, ಮಾಸ್ಕ್, ಕೈಚೀಲ ಸೇರಿದಂತೆ ಪ್ರತಿಯೊಂದನ್ನು ನಾವೇ ಖರೀದಿಸಿ ಧರಿಸಬೇಕು. ಸುರಕ್ಷಾ ಸಾಧನ ನೀಡಿ ಎಂದರೆ ನಾವು ಕೊಡುವುದಿಲ್ಲ. ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲವಾದರೆ ಮನೆಗೆ ಹೋಗಿ ಎಂಬ ಉದ್ದಟತನದ ಉತ್ತರ ನೀಡುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು.

ಕೂಡಲೇ ಹುದ್ದೆಗೆ ತಕ್ಕ ವೇತನ ನಿಗದಿಯಾಗಬೇಕು. ನೌಕರರು ಪಡೆಯುವ ಬಗ್ಗೆ ಸಂಬಳಕ್ಕೆ ಸ್ಯಾಲರಿ ಸರ್ಟಿಫೀಕೆಟ್ ನೀಡಬೇಕು. ಕಾರ್ಖಾನೆ ಪ್ರಾರಂಭಕ್ಕೂ ಮುನ್ನ ಕಾರ್ಮಿಕರಿಗೆ ನೀಡಿದ್ದ ಭರವಸೆಗಳನ್ನು ಪೂರೈಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.

ಕಾರ್ಖಾನೆ ಗುತ್ತಿಗೆದಾರ ನಿರಾಣಿಯವರ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆ ನೇತೃತ್ವವನ್ನು ಕಾರ್ಮಿಕರಾದ ರಮೇಶ್, ರಾಜಶೇಖರ್, ಪ್ರಕಾಶ್, ಪ್ರಮೋದ್, ಅರವಿಂದ, ಮಧು ವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News