ವಾಹನ ಅಡ್ಡಗಟ್ಟಿ ಬೆದರಿಸುವ ಮೂಲಕ ಬಿಜೆಪಿಯ ಇನ್ನೊಂದು ಮುಖ ಅನಾವರಣ: ಸಿದ್ದರಾಮಯ್ಯ

Update: 2020-10-28 11:55 GMT

ಬೆಂಗಳೂರು, ಅ. 27: `ನಿನ್ನೆ ನಾನು ರಾಜರಾಜೇಶ್ವರಿ ನಗರ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ಸಮೀಪ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಭಾಷಣಕ್ಕೆ ಅಡ್ಡಿಪಡಿಸಿದ್ದರಲ್ಲದೆ, ನಾನು ವಾಪಾಸು ತೆರಳುವಾಗ ವಾಹನ ಅಡ್ಡಗಟ್ಟಿ ಬೆದರಿಸುವ ಪ್ರಯತ್ನ ಮಾಡಿದ್ದರು. ಇದು ಬಿಜೆಪಿಯವರ ರಾಜಕಾರಣದ ಇನ್ನೊಂದು ಮುಖವನ್ನು ಅನಾವರಣಗೊಳಿಸಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಟೀಕಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ಆರ್.ಆರ್.ನಗರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದ್ದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರೇ ಅಲ್ಲಿನ ಕಾನೂನು ಬಾಹಿರ ಚಟುವಟಿಕೆಗಳಿಗೆ, ಗೂಂಡಾಗಿರಿಗೆ ಮೂಲ ಕಾರಣ. ಸೋಲಿನ ಭಯದಿಂದ ಜಿ.ಕೆ.ವೆಂಕಟೇಶ್ ಅಂಥವರನ್ನು ಮುಂದೆ ಬಿಟ್ಟು ಮುನಿರತ್ನ ಅವರೆ ಗಲಭೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನವಿದೆ' ಎಂದು ಅವರು ತಿಳಿಸಿದ್ದಾರೆ.

`ನಮ್ಮ ಪಕ್ಷದ ಶಿರಾ ಕ್ಷೇತ್ರದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರನ್ನು ಬಿಜೆಪಿ ನಾಯಕರು ಮುದಿ ಎತ್ತು ಎಂದು ಹೀಗಳೆದಿದ್ದಾರೆ, ಹಾಗಾದರೆ ಬಿ.ಎಸ್.ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರೇನು ಎಳೆ ಕಡಸು(ಕರುಗಳೇ)ಗಳಾ?' ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, `ಚುನಾವಣೆಯನ್ನು ಸಾಧನೆ ಮತ್ತು ಸಿದ್ಧಾಂತದ ಮೂಲಕ ಎದುರಿಸಲಾಗದವರು ಮಾತ್ರ ಸೋಲಿನ ಭೀತಿಯಿಂದ ಈ ರೀತಿ ಚಾರಿತ್ರ್ಯಹರಣ, ಗೂಂಡಾಗಿರಿ, ಹಣ ಹಂಚುವುದು ಮೊದಲಾದ ಅಡ್ಡದಾರಿ ಹಿಡಿಯುವುದು' ಎಂದು ವಾಗ್ದಾಳಿ ನಡೆಸಿದ್ದಾರೆ.

`ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಪಕ್ಷದ ಹೈಕಮಾಂಡ್ ಹಾಗೂ ಶಾಸಕರು ನಿರ್ಧರಿಸುತ್ತಾರೆ. ಕೆಲವರು ಅಭಿಮಾನದಿಂದ ಇವರೇ ನಮ್ಮ ಮುಂದಿನ ಮುಖ್ಯಮಂತ್ರಿ ಅಂತ ಹೇಳ್ತಾರೆ, ಅವರಿಗೆಲ್ಲ ಮಾತಾಡ್ಬೇಡಿ ಅಂತ ಹೇಳೋಕಾಗುತ್ತಾ?' ಎಂದು ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರ ಟೀಕೆಗೆ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News