ಶಾಹೀನ್ ಸಂಸ್ಥೆಯಲ್ಲಿ ಜಾತ್ಯತೀತ ವಾತಾವರಣವಿದೆ: ನೀಟ್ ಟಾಪರ್ ಕಾರ್ತಿಕ್ ರೆಡ್ಡಿ

Update: 2020-10-28 12:33 GMT

ಬೆಂಗಳೂರು, ಅ.28: ಬೀದರ್ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ಜಾತ್ಯತೀತ, ಧರ್ಮಾತೀತ ವಾತಾವರಣ ಇದೆ ಎಂದು NEET ಪರೀಕ್ಷೆಯಲ್ಲಿ ದೇಶಕ್ಕೆ 9ನೇ ರ‍್ಯಾಂಕ್ ಹಾಗೂ ರಾಜ್ಯಕ್ಕೆ ಮೊದಲ ರ‍್ಯಾಂಕ್ ಗಳಿಸಿದ ಕಾರ್ತಿಕ್ ರೆಡ್ಡಿ ಅಭಿಪ್ರಾಯಪಟ್ಟರು.

ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಹೀನ್ ವಿದ್ಯಾಲಯದೊಳಗೆ ಯಾವುದೇ ರೀತಿಯ ಅಸಮಾನತೆ ಇಲ್ಲ. ಅಲ್ಲಿ ದ್ವೇಷದ ಪಾಠವೂ ಕಲಿಸುವುದಿಲ್ಲ. ಬದಲಾಗಿ, ಜಾತ್ಯತೀತ ಮೌಲ್ಯಗಳ ಮೇಲೆ ನಿಂತಿದೆ ಎಂದರು.

ಇನ್ನು ನೀಟ್ ಪರೀಕ್ಷೆಯ ಸಾಧನೆ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವು ಸಂಕಷ್ಟಗಳು ಅವಕಾಶಗಳಾಗಿ ಪರಿವರ್ತನೆ ಆಗುತ್ತವೆ. ಅದೇ ರೀತಿ, ಕೊರೋನ ಹಾವಳಿ ಮತ್ತು ಲಾಕ್‍ಡೌನ್ ಅವಧಿ ನನಗೆ ಅವಕಾಶ ಆಯಿತು. ಬಹುತೇಕರಿಗೆ ಪರೀಕ್ಷೆ ನಡೆಯುವ ಬಗ್ಗೆ ಅನಿಶ್ಚಿತತೆ ಇತ್ತು. ಆದರೆ, ನನಗೆ ಖಾತ್ರಿ ಇತ್ತು. ಈ ಅವಧಿಯಲ್ಲಿ ನಿತ್ಯ 10-12 ತಾಸು ಓದುತ್ತಿದ್ದೆ. ಬಿಡುವು ಸಿಕ್ಕಾಗ ವ್ಯಾಯಾಮ, ಕ್ರಿಕೆಟ್ ಆಡುತ್ತಿದ್ದೆ. ನನ್ನ ಓದಿಗೆ ಶಾಹೀನ್ ಶಿಕ್ಷಣ ಸಂಸ್ಥೆಯ ಮಟೀರಿಯಲ್, ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನ ತುಂಬಾ ಸಹಾಯವಾಯಿತು ಎಂದು ಹೇಳಿದರು.

ತದನಂತರ, ದೇಶಕ್ಕೆ 85 ರ‍್ಯಾಂಕ್ ಹಾಗೂ ರಾಜ್ಯಕ್ಕೆ 3ನೆ ರ‍್ಯಾಂಕ್ ಗಳಿಸಿದ ಮುಹಮ್ಮದ್ ಅಬ್ರಾಝ್ ಅಹ್ಮದ್ ಮಾತನಾಡಿ, ನನ್ನ ತಂದೆ ಲಾರಿ ಚಾಲಕರಾಗಿದ್ದರು. ಐದು ವರ್ಷಗಳ ಹಿಂದೆ ಪಾರ್ಶ್ವವಾಯುವಿನಿಂದ ಕೆಲಸ ಬಿಡಬೇಕಾಯಿತು. ನಂತರ ತುಂಬಾ ಸಮಸ್ಯೆ ಆಯಿತು. ಆಗ ಶಾಹೀನ್ ಸಂಸ್ಥೆ ಸಂಪರ್ಕಕ್ಕೆ ಸಿಕ್ಕಿತು. ಅಲ್ಲಿ ಪ್ರವೇಶ ಪಡೆದ ನಂತರ ಕಷ್ಟಪಟ್ಟು ಓದಿದೆ. ಉತ್ತಮ ಫಲಿತಾಂಶ ಬಂದಿತು ಎಂದು ಹೇಳಿದರು.

ಇದಕ್ಕೂ ಮೊದಲು ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿ ಮುಹಮ್ಮದ್ ಆನಸ್ ಮಾತನಾಡಿ, `ನಾನು ಮೂಲತಃ ಉತ್ತರ ಪ್ರದೇಶದವನಾಗಿದ್ದು, ಬಿಎಸ್ಸಿ ವ್ಯಾಸಂಗ ಮಾಡುತ್ತ ಮೂರು ಬಾರಿ ನೀಟ್ ಪರೀಕ್ಷೆ ಬರೆದಿದ್ದೆ. ಪ್ರತಿ ಸಲವೂ ಕಡಿಮೆ ಅಂಕ ಗಳಿಸಿದೆ. ನಂತರ ಬೀದರ್ ನ ಶಾಹೀನ್ ಸಂಸ್ಥೆಯು ಸಂಪರ್ಕಕ್ಕೆ ಸಿಕ್ಕ ಮೇಲೆ ಅಲ್ಲಿ ಪ್ರವೇಶ ಪಡೆದೆ. ಪಿಯುಸಿ ಮೊದಲ ವರ್ಷದಿಂದ ಮತ್ತೆ ನನ್ನ ವ್ಯಾಸಂಗ ಶುರುವಾಯಿತು. ಈಗ ದೇಶದ ಟಾಪ್ ಐದು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅವಕಾಶ ದೊರೆಯುವಂತಾಗಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News