ನನ್ನ ಯೋಜನೆಗಳನ್ನು ಬಿಜೆಪಿ ಸರಕಾರ ನಿಲ್ಲಿಸಿದೆ: ಕುಮಾರಸ್ವಾಮಿ ಆರೋಪ

Update: 2020-10-28 12:39 GMT

ಬೆಂಗಳೂರು, ಅ. 28: ಕೇವಲ ರೈತರ ಸಾಲಮನ್ನಾ ಮಾಡಿರುವುದಲ್ಲದೆ, ಬೀದಿಬದಿ ವ್ಯಾಪಾರಿಗಳಿಗೆ ಸಹಾಯವಾಗಲಿ ಎಂದು ಬಡವರ ಬಂಧು ಆರಂಭಿಸಿದೆ. ಸಾಲಗಾರರ ಶೋಷಣೆಯಿಂದ ಜನರನ್ನು ರಕ್ಷಿಸಲು ಋಣಮುಕ್ತ ಕಾಯಿದೆ ಜಾರಿಗೆ ತಂದಿದ್ದೆ. ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ನೂರು ಕೋಟಿ ರೂ. ತೆಗೆದಿರಿಸಿದ್ದೆ. ಇವುಗಳನ್ನೆಲ್ಲಾ ಈಗಿನ ಬಿಜೆಪಿ ಸರಕಾರ ನಿಲ್ಲಿಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.

ಬುಧವಾರ ಇಲ್ಲಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್‍ನಲ್ಲಿದ್ದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹಣ ಲೂಟಿ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ, ಚುನಾವಣಾ ಅಕ್ರಮ ಎಸಗುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದರೆ, ಕನಕಪುರದಿಂದ ಗೂಂಡಾಗಳನ್ನು ಕರೆಸಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆಂದು ಮುನಿರತ್ನ ಕಾಂಗ್ರೆಸ್ ವಿರುದ್ಧ ಆರೋಪಿಸುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳಿಗಿಂತ ರಾಜರಾಜೇಶ್ವರಿ ನಗರದಲ್ಲಿ ನಮಗೆ ಶಾಂತಿಯ ಅವಶ್ಯಕತೆ ಇದೆ ಎಂದು ಹೇಳಿದರು.

ಹಕ್ಕುಪತ್ರ ಕೊಟ್ರೆ, ಕಣ್ಣು ಕೊಟ್ಟಂಗೆ ನೀವು: ಬಂಗಾರಪ್ಪ ನಗರದ ಮಹಿಳೆಯೊಬ್ಬರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಮಗೆ ಹಕ್ಕುಪತ್ರ ಕೊಡಿಸಿ. ಇಲ್ಲಿ ಬೆದರಿಕೆ ಹಾಕ್ತಾರೆ ನಮಗೆ ರಕ್ಷಣೆ ಕೊಡಿಸಿ. ನೀವು ಹಕ್ಕು ಪತ್ರ ಕೊಟ್ರೆ ನಮಗೆ ಎರಡು ಕಣ್ಣು ಕೊಟ್ಟಂಗೆ ಎಂದು ಮನವಿ ಮಾಡಿದರು.

ಮಹಿಳೆಯ ಅಹವಾಲು ಆಲಿಸಿದ ಮಾಜಿ ಸಿಎಂ ಕುಮಾರಸ್ವಾಮಿ ನಿಮಗೇನೆ ಕಷ್ಟ ಬಂದ್ರೂ, ಯಾರೇ ಬೆದರಿಕೆ ಹಾಕಿದ್ರೂ ನಮ್ಮ ಮನೆಗೆ ಬನ್ನಿ, ಹಕ್ಕುಪತ್ರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News