ಪ್ರಾದೇಶಿಕ ಪಕ್ಷವನ್ನು ರಾಜ್ಯದಲ್ಲಿ ಉಳಿಸಲು ಹೋರಾಟ: ಎಚ್.ಡಿ.ದೇವೇಗೌಡ

Update: 2020-10-28 13:50 GMT

ಬೆಂಗಳೂರು, ಅ.28: ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಈ ದೇಶದ ಚುಕ್ಕಾಣಿ ಹಿಡಿದಿತ್ತು, ನಾಯಕರ ನಡುವಿನ ವ್ಯತ್ಯಾಸದಿಂದ ಒಡೆದು ಹೋಗಿದೆ, ಉದಾಹರಣೆಗೆ ಬಿಹಾರದಲ್ಲಿ ದೊಡ್ಡ ಜನಬೆಂಬಲ ಲಾಲೂ ಪ್ರಸಾದ್ ಅವರ ಪಕ್ಷಕ್ಕೆ ಸಿಗುತಿತ್ತು, ಬೇರೆ ಬೇರೆ ನಾಯಕರು ಬೇರೆ ಬೇರೆ ಪಕ್ಷ ಮಾಡಿಕೊಂಡರು, ಹೀಗಾಗಿ ಈಗ ಸಣ್ಣ ಸಣ್ಣ ಬಣಗಳಾದ ಉದಾಹರಣೆ ಕಾಣಬಹುದಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ಬುಧವಾರ ನಗರದ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ರಾಜ್ಯದ ಏಳಿಗೆಗಾಗಿ ಮತ್ತು ಪ್ರಾದೇಶಿಕ ಪಕ್ಷವನ್ನು ಈ ರಾಜ್ಯದಲ್ಲಿ ಗಟ್ಟಿಯಾಗಿ ಉಳಿಸಲು ಕೊನೆಯವರೆಗೂ ಹೋರಾಡುತ್ತೇನೆ. ಜೆಡಿಎಸ್ ಅಸ್ತಿತ್ವದಲ್ಲಿ ಇರಲ್ಲ ಅಂತ ಕೆಲವರು ಹೇಳುತ್ತಾರೆ. ಇಂಥ ಹೇಳಿಕೆ ನೀಡುವವರು ಇಲ್ಲಿ ಇದ್ದು ಅಧಿಕಾರ ಅನುಭವಿಸಿ ಹೋಗಿದ್ದಾರೆ, ಅಂತವರ ಹೇಳಿಕೆ ಕೇಳಿ ಸ್ವಲ್ಪ ಬೇಸರ ಆಯ್ತು ಎಂದರು.

ವಿಧಾನಪರಿಷತ್ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ನಮ್ಮ ಹೋರಾಟ ಮಾಡಿದ್ದೇವೆ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ನಮ್ಮ ಬೆಂಬಲ ನೀಡಿದ್ದೇವೆ. ಇದರ ಜವಾಬ್ದಾರಿಯನ್ನು ಬಸವರಾಜ ಹೊರಟ್ಟಿ ಅವರಿಗೆ ನೀಡಿದ್ದೇವೆ. ನಾನು ಮತ್ತೊಂದು ಸುತ್ತು ಶಿರಾದಲ್ಲಿ ಪ್ರಚಾರ ಮಾಡುತ್ತೇನೆ. ನಾವು ಮಾಡುತ್ತಿರುವ ಹೋರಾಟ ಯಾರ ವಿರುದ್ಧದ ಸವಾಲಿಗೂ ಅಲ್ಲ, ಪ್ರಾದೇಶಿಕ ಪಕ್ಷವನ್ನು ಉಳಿಸಲು ಎಂದು ಅವರು ಹೇಳಿದರು.

ಆರ್.ಆರ್.ನಗರ ಹಾಗೂ ಶಿರಾ ಎರಡು ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ತುಮಕೂರು ಜಿಲ್ಲೆಯಲ್ಲಿ ಕೆಲಸ ಮಾಡಲು ನಮಗೆ ಏನೂ ತೊಂದರೆ ಇಲ್ಲ, ಬೇರೆಯವರು ಹಣ ಖರ್ಚು ಮಾಡುವ ಬಗ್ಗೆ ನಾನು ಮಾತನಾಡುವುದಿಲ್ಲ, ಅಂತವರ ವಿರುದ್ಧ ಜನರೇ ತಿರ್ಮಾನ ಮಾಡುತ್ತಾರೆ. ಪ್ರಜ್ವಲ್, ನಿಖಿಲ್, ಕುಮಾರಸ್ವಾಮಿ, ನಾನು ಮತ್ತು ಪಕ್ಷದ ಎಲ್ಲ ಮುಖಂಡರು ಪ್ರಚಾರ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಮೈತ್ರಿ ಸರಕಾರವನ್ನು ಯಾರು ಪತನಗೊಳಿಸಿದರು? ಬಿಜೆಪಿ ಸರಕಾರ ಹೇಗೆ ಅಧಿಕಾರಕ್ಕೆ ಬಂತು? ಎಂಬುದು ಇಡಿ ರಾಜ್ಯಕ್ಕೆ ಗೊತ್ತಿದೆ, 16 ಶಾಸಕರನ್ನು ಯಾರು ಮುಂಬೈಗೆ ಕಳುಹಿಸಿದರು ಎಂಬುದನ್ನು ಅಲ್ಲಿಗೆ ಹೋದ ಶಾಸಕರೇ ಹೇಳಿದ್ದಾರೆ. ಅವರೆಲ್ಲ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ. ಕೆಲವರು ಮಾಧ್ಯಮಗಳ ಸಂದರ್ಶನದಲ್ಲಿ ಎಲ್ಲಾ ವಿಷಯ ಹೇಳಿದ್ದಾರೆ ಎಂದು ದೇವೇಗೌಡ ತಿಳಿಸಿದರು.

ಶಿರಾದಲ್ಲಿ ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ಯಾವ ರೀತಿ ಚುನಾವಣಾ ತಂತ್ರ ನಡೆಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಪೊಲೀಸರ ಮೂಲಕ ದುಡ್ಡು ಹಂಚುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕೆಲವರು ದೂರು ಕೊಟ್ಟರೂ ಯಾವುದೇ ಕ್ರಮ ಜರಗಿಸುತ್ತಿಲ್ಲ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ರಾಜ್ಯದಲ್ಲಿ ನಿಷ್ಪಕ್ಷಪಾತವಾದ ಚುನಾವಣೆ ನಡೆಸಲು ಸಾಧ್ಯವೆ? ಯಾಕೆಂದರೆ ರಾಷ್ಟ್ರದಲ್ಲೇ ಆ ರೀತಿ ಆಗಿ ಹೋಗಿದೆ ಏನ್ ಮಾಡೋದು? ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಜಾತಿ ರಾಜಕಾರಣ ಹೊಸದೇನಲ್ಲ. ನನ್ನನ್ನ 1989ರಲ್ಲಿ ಪಕ್ಷದಿಂದ ಹೊರಹಾಕಿದರು. ಆಗ ನನ್ನ ಜೊತೆಗೆ ಬಂದವರು ದತ್ತಾ, ಬಿ.ಎಲ್.ಶಂಕರ್, ಆಗ ಏನೇನು ಆಯ್ತು ಎಂದು ಎಲ್ಲರಿಗೂ ಗೊತ್ತಿದೆ. ಆಗಿನಿಂದಲೂ ಕೆಲವರು ಜಾತಿ ರಾಜಕಾರಣ ಮಾಡಿಕೊಂಡೆ ಬಂದಿದ್ದಾರೆ, ಜಾತಿ ರಾಜಕಾರಣದ ಬಗ್ಗೆ  ಮಾತಾಡೋದಲ್ಲ, ಅಭಿವೃದ್ಧಿ ಬಗ್ಗೆ ಮಾತಾಡಲಿ, ಜಾತಿ ರಾಜಕಾರಣದ ಬಗ್ಗೆ  ಮಾತಾನಾಡೋದು ಮೊದಲು ಬಿಡಲಿ ಎಂದು ದೇವೇಗೌಡ ಹೇಳಿದರು.

ಸಮ್ಮಿಶ್ರ ಸರಕಾರದಲ್ಲಿ ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಬೆಂಬಲಕ್ಕೆ ನಿಂತಿದ್ರಾ ಎಂಬ ಚರ್ಚೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷದ ಬೆಂಬಲಕ್ಕೆ ನಿಂತಿದ್ದೆ ಅಂತ ಅವರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಈಗ ಅವರು ಒಂದು ರಾಷ್ಟ್ರೀಯ ಪಕ್ಷದ ರಾಜ್ಯದ ಅಧ್ಯಕ್ಷರು, ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಕುಮಾರಸ್ವಾಮಿ ಏನ್ ರಾಜಕೀಯ ಮಾಡಬೇಕು ಅದನ್ನ ಕುಮಾರಸ್ವಾಮಿ ಮಾಡುತ್ತಿದ್ದಾರೆ. ಯಾರು ಯಾರ ಬೆಂಬಲಕ್ಕೆ ನಿಂತಿದ್ದರು ಎಂದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ದೇವೇಗೌಡ ಹೇಳಿದರು.

ಲಕ್ಷ್ಮಣ್ ರಾವ್ ವರದಿ ಜಾರಿಗೆ ಆಗ್ರಹ: ಬೆಂಗಳೂರಿನಲ್ಲಿ ರಾಜಾಕಾಲುವೆ ಒತ್ತುವರಿಯಿಂದಾಗಿ ಮಳೆ ಹಾನಿ ಆಗುತ್ತಿದೆ. ಒತ್ತುವರಿ ಬಗ್ಗೆ ತಜ್ಞ ಲಕ್ಷ್ಮಣ್ ರಾವ್ ಸಮಿತಿಯ ವರದಿಯಲ್ಲಿ ಪ್ರಸ್ತಾಪ ಆಗಿದೆ, ಸುಮ್ಮನೆ ಮೊಸಳೆ ಕಣ್ಣೀರು ಹಾಕುವ ಕೆಲಸ ಮಾಡದೆ, ಆ ವರದಿಯಲ್ಲಿರುವ ಶಿಫಾರಸು ಜಾರಿಗೆ ತರಲು ಸ್ವಲ್ಪ ಕಠಿಣ ನಿರ್ಧಾರ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಒತ್ತುವರಿ ವಿಚಾರದಲ್ಲಿ ಅನೇಕ ರಾಜಕಾರಣಿಗಳು ಇರಬಹುದು, ಕೆರೆಗಳ ಒತ್ತುವರಿ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪ ಆಗಿದೆ. ಕಂದಾಯ ಸಚಿವರು ಹೊಸ ಕಾಯ್ದೆ ತರುತ್ತೇನೆ ಅಂತ ಹೇಳುತ್ತಿದ್ದಾರೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಬಗ್ಗೆ ಆರ್.ಆರ್.ನಗರದ ಜನ ಯೋಚನೆ ಮಾಡಬೇಕಿದೆ ಎಂದು ಅವರು ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೆರೆ ಹಾವಳಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೆ, ರಾಜಕಾಲುವೆಗಳು ಒತ್ತುವರಿಯಾಗದಂತೆ ಕೆರೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೆ, ಆದರೆ ಇಂದು ಎರಡು ರಾಷ್ಟೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಟೀಕೆ ಮಾಡಿಕೊಳ್ಳುತ್ತಿದ್ದಾರೆ, ಜನರ ಸಮಸ್ಯೆ ಬಗ್ಗೆ ಇವರುಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ದೇವೇಗೌಡ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News