5 ಕೋಟಿ ರೂ. ವಿದ್ಯಾರ್ಥಿ ವೇತನ ಘೋಷಿಸಿದ ಶಾಹೀನ್ ಶಿಕ್ಷಣ ಸಂಸ್ಥೆ: 3 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ

Update: 2020-10-28 14:01 GMT

ಬೆಂಗಳೂರು, ಅ.28: ಪ್ರಸಕ್ತ ಸಾಲಿನ ದೀರ್ಘ ಕಾಲದಿಂದ `ನೀಟ್' ಪರೀಕ್ಷೆ ಬರೆಯುತ್ತಿರುವ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು 5 ಕೋಟಿ ರೂ. ವಿದ್ಯಾರ್ಥಿ ವೇತನ ಘೋಷಣೆ ಮಾಡಿದೆ.

ಬುಧವಾರ ಈ ಕುರಿತು ನಗರದ ಖಾಸಗಿ ಹೋಟೆಲಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಈ ಮೊದಲು 2 ಕೋಟಿ ರೂ.ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಆದರೆ, ಕೋವಿಡ್ ಮತ್ತು ಲಾಕ್ಡೌನ್ ಹಿನ್ನೆಲೆಯಲ್ಲಿ ಈ ಮೊತ್ತವನ್ನು 5 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.

ದೇಶದ ಎಲ್ಲ ಶಾಖೆಗಳಲ್ಲಿ ಸುಮಾರು ಎರಡರಿಂದ ಮೂರು ಸಾವಿರ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ. ಈ ಪೈಕಿ ರಾಜ್ಯದಲ್ಲೇ ಸಾವಿರ ವಿದ್ಯಾರ್ಥಿಗಳಿಗೆ ನೆರವಾಗುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿ ರಾಜ್ಯದ ಒಟ್ಟಾರೆ ಸರಕಾರಿ ವೈದ್ಯಕೀಯ ಕಾಲೇಜುಗಳ ಪೈಕಿ ಶೇ. 1ರಷ್ಟು (327 ವಿದ್ಯಾರ್ಥಿಗಳು) ಶಾಹೀನ್ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ. ಬರುವ ವರ್ಷ ಈ ಪ್ರಮಾಣ ಶೇ. 10ಕ್ಕೆ ಏರಿಕೆಯಾಗಲಿದ್ದು, ರಾಷ್ಟ್ರಮಟ್ಟದಲ್ಲಿ ಶೇ. 0.8ರಷ್ಟು ಆಗಲಿದೆ. ಇದು ಸಂಸ್ಥೆಯಲ್ಲಿ ನೀಡುತ್ತಿರುವ ಶಿಕ್ಷಣದ ಗುಣಮಟ್ಟ ಮತ್ತು ಬದ್ಧತೆಗೆ ಸಾಕ್ಷಿ ಎಂದು ವಿವರಿಸಿದರು.

ಇಲ್ಲಿನ ವಿದ್ಯಾರ್ಥಿಗಳಿಗೆ ಟ್ಯೂಷನ್ ಇರುವುದಿಲ್ಲ ಎಂದ ಅವರು, ಶಾಲೆ ಬಿಟ್ಟ ಮಕ್ಕಳಿಗಾಗಿಯೇ ಎಐಸಿಯು(ಅಕಾಡೆಮಿಕ್ ಇಂಟೆನ್ಸಿವ್ ಕೇರ್ ಯೂನಿಟ್) ತೆರೆಯಲಾಗಿದೆ. ಸದ್ಯ 333 ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದು, ನೇರವಾಗಿ 9 ಅಥವಾ 10ನೇ ತರಗತಿಗೆ ಪ್ರವೇಶ ಪಡೆದು, ಪರೀಕ್ಷೆ ಬರೆಯಲು ಸಮರ್ಥರಾಗಿದ್ದಾರೆ ಎಂದರು.

ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ಶಾಲೆಬಿಟ್ಟವರು, ಬಡ ಮಕ್ಕಳಿಂದ ಹಿಡಿದು ಐಎಎಸ್ ಬರೆಯಲು ಇಚ್ಛಿಸುವ ಅಥವಾ ವೈದ್ಯಕೀಯ, ಎಂಜಿನಿಯರ್ ನಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳವರೆಗೂ ವಿವಿಧ ಹಂತದ ತರಬೇತಿ ನೀಡಲಾಗುತ್ತದೆ ಎಂದು ಡಾ.ಅಬ್ದುಲ್ ಖದೀರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಯ ಹುಬ್ಬಳ್ಳಿ ಶಾಖೆ ನಿರ್ದೇಶಕ ಅಶ್ರಫ್ ಅಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. 

ಉಚಿತ ನೀಟ್ ತರಬೇತಿ
ಕೊರೋನ ಸೋಂಕಿನ ಪರಿಣಾಮ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ನೀಟ್ ತರಬೇತಿ ನೀಡಲಾಗುವುದು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ಇದೆ. ಇದಕ್ಕಾಗಿ ವಿದ್ಯಾರ್ಥಿಗಳು ಸಂಸ್ಥೆಯ ವೆಬ್ಸೈಟ್ ನಲ್ಲಿ ಹೆಸರು ನೋಂದಾಯಿಸಿ, ಉಚಿತವಾಗಿ ನೆರವು ಪಡೆಯಬಹುದು. ನೀಟ್ ದೀರ್ಘ ಕಾಲದ ರಿಪೀಟರ್ ಪ್ರವೇಶಕ್ಕೆ ನ. 1 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ: 18001216235 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News