ಲೋಕಾಯುಕ್ತ ಬದಲು ಎಸಿಬಿ ರಚಿಸಿ ಹಲ್ಲಿಲ್ಲದ ಹಾವಿನಂತೆ ಮಾಡಿದ ಸಿದ್ದರಾಮಯ್ಯ: ಬಿಜೆಪಿ ಟೀಕೆ

Update: 2020-10-28 14:06 GMT

ಬೆಂಗಳೂರು, ಅ.28: ಸಿದ್ದರಾಮಯ್ಯ, ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯ ಬದಲಾಗಿ ಎಸಿಬಿ ರಚಿಸಿ ಹಲ್ಲಿಲ್ಲದ ಹಾವಿನಂತೆ ಮಾಡಿದ ಕೀರ್ತಿ ನಿಮಗೆ ಸಲ್ಲಬೇಕು. ಇದೆಲ್ಲಾ ನಿಮ್ಮ ಹಾಗು ನಿಮ್ಮ ಪಕ್ಷದ ಭ್ರಷ್ಟಾಚಾರದ ಮಹಾನ್ ಇತಿಹಾಸವನ್ನು ರಕ್ಷಿಸಲು ಮಾಡಿಕೊಂಡ ಕುಟಿಲ ಉಪಾಯ ಅಲ್ಲವೇ? ಎಂದು ಬಿಜೆಪಿ ಸರಣಿ ಟ್ವೀಟ್‍ಗಳನ್ನು ಮಾಡುವ ಮೂಲಕ ಟೀಕಿಸಿದೆ.

ಸಿದ್ದರಾಮಯ್ಯ, ನಿಮ್ಮ ಮೇಲೆ 60ಕ್ಕೂ ಅಧಿಕ ಭ್ರಷ್ಟಾಚಾರದ ಪ್ರಕರಣಗಳಿದ್ದವು. ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಹಲ್ಲಿಲ್ಲದ ಹಾವಿನಂತಿರುವ ಎಸಿಬಿಯ ಮೂಲಕ ಬಹುತೇಕ ಪ್ರಕರಣಗಳಿಗೆ ನೀವೇ ಅಂತ್ಯ ಹಾಡಿಸಿದಿರಿ. ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಉನ್ನತ ಸ್ಥಾನಕ್ಕೇರಿಸಿದ್ದೇ ನಿಮ್ಮ ಸಾಧನೆಯಲ್ಲವೇ? ಎಂದು ಬಿಜೆಪಿ ಟೀಕಿಸಿದೆ.

ಸಿದ್ದರಾಮಯ್ಯ, 2016-17ನೇ ಸಾಲಿನಲ್ಲಿ ನೀವು ಮಂಡಿಸಿದ್ದ ಬಜೆಟ್‍ನಲ್ಲಿ ವಿವಿಧ ಇಲಾಖೆಗಳು 35 ಸಾವಿರ ಕೋಟಿ ರೂ.ಭ್ರಷ್ಟಾಚಾರ ನಡೆಸಿರುವುದು ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿತ್ತು. ಹೋದಲ್ಲಿ ಬಂದಲ್ಲಿ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವುದು ಮತ್ತೊಮ್ಮೆ ಭಾರೀ ಭ್ರಷ್ಟಾಚಾರ ಮಾಡಲೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯ, ಬಡವರು ಹಸಿವಿನಿಂದಿರಬಾರದು ಎಂದು ಇಂದಿರಾ ಕ್ಯಾಂಟೀನ್ ಜಾರಿಗೆ ತಂದಿರಿ, ಆದರೆ ಬಡವರ ಹಸಿವಿಗಿಂತ ಹೆಚ್ಚಾಗಿ ನೀವು ತುಂಬಿಸಿದ್ದು ಮಾತ್ರ ಶ್ರೀಮಂತರ ತಿಜೋರಿಯನ್ನು. ಬಡವರ ಹೊಟ್ಟೆ ತುಂಬಿಸುತ್ತೇನೆಂದು ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ಮಾಡಿರುವ ನಿಮ್ಮನ್ನು ಬಡವರು ಕ್ಷಮಿಸಬಹುದೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯ, ಕರ್ನಾಟಕ್ಕೆ ನಿಮ್ಮ ಕೊಡುಗೆ ಒಮ್ಮೆ ಸ್ಮರಿಸಿಕೊಳ್ಳಿ. ಭ್ರಷ್ಟಾಚಾರ, ಹಿಂದೂ ಕಾರ್ಯಕರ್ತರ ಕೊಲೆ, ರೈತರ ಆತ್ಮಹತ್ಯೆ, ಸಮಾಜ ಒಡೆದದ್ದು, ಮೈತ್ರಿ ಸರಕಾರಕ್ಕಾಗಿ ನೀವು ಬಾಗಿಲು ಬಡಿದಿದ್ದ ದೇವೇಗೌಡರೇ ನಿಮ್ಮ ಸರಕಾರ ಭ್ರಷ್ಟಾತಿ ಭ್ರಷ್ಟ ಸರಕಾರ ಎಂದು ಜರೆದಿದ್ದು ನೆನಪಿದೆಯೇ? ಎಂದು ಬಿಜೆಪಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News