'ಉಪಚುನಾವಣೆ' ಪ್ರಚಾರದ ಅಖಾಡಕ್ಕಿಳಿದ ಮುಖ್ಯಮಂತ್ರಿ ಯಡಿಯೂರಪ್ಪ

Update: 2020-10-28 14:23 GMT

ಬೆಂಗಳೂರು, ಅ. 28: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಮುಖ್ಯಮಂತ್ರಿ ಬಿ.ಎಸ್‍ಯಡಿಯೂರಪ್ಪ ಇದೀಗ ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿದ್ದು, ಅ.30ರಿಂದ ಬಿಜೆಪಿ ಅಭ್ಯರ್ಥಿಗಳ ಪ್ರಚಾರದ ಅಖಾಡಕ್ಕಿಳಿಯಲಿದ್ದಾರೆ.

ಅ.30ರ ಶುಕ್ರವಾರ ಬೆಳಗ್ಗೆ 9ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ವಿವಿಧೆಡೆಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಚಾರ ನಡೆಸಲಿದ್ದು, ರೋಡ್ ಶೋ, ಪ್ರಚಾರ ಭಾಷಣದ ಮೂಲಕ ಮತಯಾಚನೆ ಮಾಡಲಿದ್ದಾರೆ. ರಸ್ತೆ ಮಾರ್ಗದ ಮೂಲಕ ಬೆಳಗ್ಗೆ 11 ಗಂಟೆಗೆ ಶಿರಾಗೆ ಭೇಟಿ ನೀಡಲಿರುವ ಸಿಎಂ ಬಿಎಸ್‍ವೈ, ಕ್ಷೇತ್ರದ ಮದಲೂರಿನಲ್ಲಿ ಆಯೋಜಿಸಿರುವ ಉಪಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅನಂತರ ಮಧ್ಯಾಹ್ನ 3ರಿಂದ 5ಗಂಟೆ ವರೆಗೆ ಶಿರಾ ಪಟ್ಟಣದಲ್ಲಿ ಚುನಾವಣಾ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಪರ ಪ್ರಚಾರ ನಡೆಸಲಿದ್ದಾರೆ. ಅ.31ರಂದು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ರೋಡ್ ಶೋ, ಮೆರವಣಿಗೆ, ಪ್ರಚಾರ ಭಾಷಣ ಮಾಡಲಿದ್ದು, ಮತಯಾಚನೆ ಮಾಡಲಿದ್ದಾರೆ ಎಂದು ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News