ಸರಗಳ್ಳತನ, ದರೋಡೆ ಪ್ರಕರಣ: ಆರು ಅಂತರಾಜ್ಯ ಕಳ್ಳರ ಬಂಧನ

Update: 2020-10-28 14:31 GMT

ಶಿವಮೊಗ್ಗ(ಅ.28): ನಗರದಲ್ಲಿ ಇತ್ತೀಚೆಗೆ ನಡೆದ ಸರಗಳ್ಳತನ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕೋಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೆ.16ರಂದು ವಿದ್ಯಾನಗರ ಮತ್ತೂರು ರಸ್ತೆಯಲ್ಲಿ ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ಆರು ಜನರ ತಂಡವನ್ನು ಪೊಲೀಸರು ಬಂಧಿಸಿ ಅವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉತ್ತರ ಪ್ರದೇಶ್ ನೀರತ್ ಸಿಟಿಯ ಫೈಝ‌ಲ್(25), ಸಲ್ಮಾನ್(24), ಆಶಿಸ್‌ ಕುಮಾರ್(36), ಮೆಹತಾಬ್(35), ಸಲ್ಮಾನ್(22) ಹಾಗೂ ಶಿವಮೊಗ್ಗ ಜೋಸೆಫ್ ನಗರದ ನಿವಾಸಿ, ಮೂಲತಃ ಮೀರತ್‌ನವನಾದ ಮುಹಮ್ಮದ್ ಚಾಂದ್ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳಿಂದ ದ್ವಿಚಕ್ರ ವಾಹನ ಹಾಗೂ 2 ಪಿಸ್ತೂಲ್, 12 ಜೀವಂತ ಗುಂಡುಗಳು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಇವರುಗಳೆಲ್ಲರೂ ಉತ್ತರ ಪ್ರದೇಶದವರಾಗಿದ್ದು, ಮೂಲತಃ ಇದೇ ಕೃತ್ಯದಲ್ಲಿ ತೊಡಗಿದ್ದರು ಎಂಬ ಸತ್ಯ ತನಿಖೆಯಿಂದ ಹೊರಬಂದಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ  2019ರಲ್ಲಿ ನಾಲ್ಕು ಪ್ರಕರಣ, 2020ರಲ್ಲಿ ನಾಲ್ಕು ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳಿಗೆ ಸಂಬಂಧಿಸಿದಂತೆ ಇವರುಗಳನ್ನು ದಸ್ತಗಿರಿ ಮಾಡಲಾಗಿದ್ದು, ಆರೋಪಿಗಳಿಂದ 213.20 ಗ್ರಾಂ ತೂಕದ ಒಟ್ಟು 9,31,050 ರೂ. ಬೆಲೆ ಬಾಳುವ ಬಂಗಾರದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

8 ಪ್ರಕರಣಗಳಲ್ಲಿ ಕೋಟೆ ಠಾಣೆಯ ಐದು ಪ್ರಕರಣಗಳು, ಜಯನಗರ ಠಾಣೆಯ ಮೂರು ಪ್ರಕರಣಗಳು ಸೇರಿವೆ ಎಂದ ಅವರು, ಈ ಕಾರ್ಯಾಚರಣೆಯು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಟಿ. ಶೇಖರ್‌ರವರ ಮಾರ್ಗದರ್ಶನದಲ್ಲಿ ನಡೆದಿದ್ದು, ಇದರಲ್ಲಿ ಕೋಟೆ ಸಿಪಿಐ ಟಿ.ಕೆ. ಚಂದ್ರಶೇಖರ್, ಮಹಿಳಾ ಠಾಣೆಯ ಅಭಯ್ ಪ್ರಕಾಶ್ ಸೋಮನಾಳ್, ಪಿಎಸ್‌ಐ ಗಳಾದ ಉಮೇಶ್, ಶಿವಾನಂದ್, ರಾಹತ್ ಅಲಿ, ಕೋಟೆ ವೃತ್ತದ ಅಧಿಕಾರಿ ವೀರೇಶಯ್ಯ, ನಾಗಪ್ಪ, ಎಎಸ್‌ಐ ಹರ್ಷ, ಸೋಮು, ಸುರೇಶ್, ಮೋಹನ್ ‌ಕುಮಾರ್, ಸುಧಾಕರ್, ಗೋಪಾಲ್, ಕಲ್ಲನಗೌಡ, ರಾಮಕೃಷ್ಣ ಮೊದಲಾದವರು ಪಾಲ್ಗೊಂಡಿದ್ದರು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News