ಜಂಬೂಸವಾರಿ ಮುಗಿಸಿ ಕಾಡಿನತ್ತ ಹೆಜ್ಜೆಹಾಕಿದ ಅಭಿಮನ್ಯು ನೇತೃತ್ವದ ಗಜಪಡೆಗಳು

Update: 2020-10-28 16:43 GMT

ಮೈಸೂರು,ಅ.28: ವಿಶ್ವ ವಿಖ್ಯಾತ ಮೈಸೂರು ದಸರಾ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗಳು ಇಂದು ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದವು.

ಅರಣ್ಯ ಇಲಾಖೆಯಿಂದ ಬುಧವಾರ ದಸರಾ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ ಆಯೋಜಿಸಲಾಗಿತ್ತು, ಗಜಪಡೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಯಶಸ್ವಿಯಾಗಿ ದಸರಾ ಮುಗಿಸಿದ ಬಳಿಕ ಇದೀಗ ಸ್ವಸ್ಥಾನಕ್ಕೆ ವಾಪಾಸ್ ಆಗುತ್ತಿವೆ. 

ಕೊರೋನ ಹಿನ್ನೆಲೆಯಲ್ಲಿ ಈ ಬಾರಿ ಸರಳ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗಿದ್ದು, ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಹೀಗಾಗಿ ಕ್ಯಾಪ್ಟನ್ ಅಭಿಮನ್ಯು ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದ. ಈ ಬಾರಿ 400 ಮೀಟರ್ ಗಷ್ಟೇ ಜಂಬೂ ಸವಾರಿ ಮೆರವಣಿಗೆ ಸೀಮಿತವಾಗಿತ್ತು. ಪ್ರತಿ ಬಾರಿಯೂ 12 ಆನೆಗಳು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದವು, ಆದರೆ ಈ ಬಾರಿ ಕೊರೋನ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲಾಗಿದ್ದು, ಕೇವಲ ಐದು ಆನೆಗಳನ್ನಷ್ಟೇ ಕರೆತರಲಾಗಿತ್ತು. ಅ.1ರಂದು ಮೈಸೂರು ನಗರವನ್ನು ಆನೆಗಳು ಪ್ರವೇಶಿಸಿದ್ದು, ಅರಣ್ಯ ಭವನದಲ್ಲಿ ತಂಗಿ, ಬಳಿಕ ಅ.2ರಂದು ಅರಮನೆಯ ಆವರಣವನ್ನು ಪ್ರವೇಶಿಸಿದ್ದವು. 54ರ ಹರೆಯದ ಅಭಿಮನ್ಯು ಅದರ ಮಾವುತ ವಸಂತ ಮತ್ತು ಕಾವಾಡಿ ರಾಜು, 47ವರ್ಷದ ವಿಕ್ರಮ ಅದರ ಮಾವುತ ಜೆ.ಕೆ.ಪುಟ್ಟ, ಕಾವಾಡಿ ಹೇಮಂತ್ ಕುಮಾರ್, 38ವರ್ಷದ ಗೋಪಿ ಅದರ ಮಾವುತ ನಾಗರಾಜು, ಕಾವಾಡಿ ಶಿವು, 61 ವರ್ಷದ ವಿಜಯ ಅದರ ಮಾವುತ ಭೋಜಪ್ಪ, ಕಾವಾಡಿ ಭರತ್ ಬಿ.ಪಿ, 42 ವರ್ಷದ ಕಾವೇರಿ, ಅದರ ಮಾವುತ ಜೆ.ಕೆ.ದೋಬಿ, ಕಾವಾಡಿ ರಂಜನ್ ಜೆ.ಎ ದಸರಾ ಜಂಬೂ ಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ್ದು ಕಾಡಿನತ್ತ ಪಯಣ ಬೆಳೆಸಿದರು.

ದಸರಾ ಯಶಸ್ವಿಗೊಳಿಸಿ ಸ್ವಸ್ಥಾನಕ್ಕೆ ಮರುಳುತ್ತಿದ್ದ ಗಜಪಡೆ ಕ್ಯಾಪ್ಟನ್ ಅಭಿಮನ್ಯುವನ್ನು ಕಂಡ ರಾಜವಂಶಸ್ಥ ಯದುವೀರ್ ಪುತ್ರ ಆದ್ಯವೀರ್ ಸಂತಸ ವ್ಯಕ್ತಪಡಿಸಿ, ಕೆಲ ಕಾಲ ಗಜಪಡೆ ಬಳಿ ಸಮಯ ಕಳೆದಿದ್ದಾನೆ.

ಆದ್ಯವೀರ್, ತನ್ನ ತಂದೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಅರಮನೆ ಆವರಣದಲ್ಲಿ ಕಾರಿನಲ್ಲಿ ಒಂದು ಸುತ್ತು ಹಾಕಿ, ಬಳಿಕ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ, ಗಜಪಡೆ ಹತ್ತಿರ ಬಂದು ಅಭಿಮನ್ಯುವಿನ ದಂತ ಮುಟ್ಟಿ ಆದ್ಯವೀರ್ ಖುಷಿಪಟ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News