ರಾಜೀನಾಮೆ ನೀಡಲಾರೆ: ಥಾಯ್ಲೆಂಡ್ ಪ್ರಧಾನಿ

Update: 2020-10-28 18:53 GMT

ಬ್ಯಾಂಕಾಕ್ (ಥಾಯ್ಲೆಂಡ್), ಅ. 28: ರಾಜೀನಾಮೆ ನೀಡಬೇಕೆಂಬ ಪ್ರತಿಪಕ್ಷಗಳ ಕರೆಯನ್ನು ಥಾಯ್ಲೆಂಡ್ ಪ್ರಧಾನಿ ಪ್ರಯೂತ್ ಚಾನ್-ಒಚ ಮಂಗಳವಾರ ತಳ್ಳಿಹಾಕಿದ್ದಾರೆ.

ತನ್ನ ರಾಜೀನಾಮೆ ಮತ್ತು ರಾಜಪ್ರಭುತ್ವದಲ್ಲಿ ಸುಧಾರಣೆಗಾಗಿ ಆಗ್ರಹಿಸಿ ದೇಶದಲ್ಲಿ ತಿಂಗಳುಗಳಿಂದ ನಡೆಯುತ್ತಿರುವ ಧರಣಿಯ ಬಗ್ಗೆ ಚರ್ಚಿಸುವುದಕ್ಕಾಗಿ ಅವರು ಕರೆದ ಸಂಸತ್‌ನ ಎರಡು ದಿನಗಳ ವಿಶೇಷ ಅಧಿವೇಶನದ ವೇಳೆ, ರಾಜೀನಾಮೆ ನೀಡಲು ಅವರು ನಿರಾಕರಿಸಿದರು.

‘‘ನಾನು ಸಮಸ್ಯೆಗಳಿಂದ ಓಡಿ ಹೋಗಲಾರೆ. ದೇಶವು ಸಮಸ್ಯೆಗಳನ್ನು ಎದುರಿಸುತ್ತಿರುವಾಗ ರಾಜೀನಾಮೆ ನೀಡುವ ಮೂಲಕ ನಾನು ನನ್ನ ಕೆಲಸವನ್ನು ನಿಲ್ಲಿಸಲಾರೆ’’ ಎಂದು ಮಾಜಿ ಸೇನಾಧಿಕಾರಿ ಸಂಸತ್ತಿನಲ್ಲಿ ಹೇಳಿದರು.

ಸಂಸತ್ತಿನ ಮೇಲ್ಮನೆಯ ಎಲ್ಲ ಸದಸ್ಯರನ್ನು ಸೇನೆ ನೇಮಿಸುತ್ತದೆ.

 2014ರಲ್ಲಿ ಕ್ಷಿಪ್ರಕ್ರಾಂತಿ ನಡೆಸಿ ಅಧಿಕಾರಕ್ಕೆ ಬಂದ ಪ್ರಯೂತ್, 2019ರಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಆದರೆ, ಈ ಚುನಾವಣೆಯಲ್ಲಿ ಅಕ್ರಮ ನಡೆಸಿ ಅವರು ಅಧಿಕಾರಕ್ಕೆ ಬಂದಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News