ಆರೆಸ್ಸೆಸ್ ಹಿನ್ನೆಲೆಯ 'ಯುವ ಬ್ರಿಗೇಡ್'ಗೆ ರಾಜ್ಯೋತ್ಸವ ಪ್ರಶಸ್ತಿ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

Update: 2020-10-29 12:22 GMT
 ಚಕ್ರವರ್ತಿ ಸೂಲಿಬೆಲೆ

ಬೆಂಗಳೂರು, ಅ. 29: ರಾಜ್ಯ ಸರಕಾರವು ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ವಲೇರಿಯನ್ ಡಿಸೋಜ, ಸಾಹಿತಿ ಪ್ರೊ.ಸಿ.ಪಿ.ಸಿದ್ದಾಶ್ರಮ, ಕ್ರೀಡಾಪಟು ಉಷಾರಾಣಿ ಸೇರಿದಂತೆ ಒಟ್ಟು 65 ಮಂದಿ ಗಣ್ಯರನ್ನು ಪ್ರಸಕ್ತ ಸಾಲಿನ `ರಾಜ್ಯೋತ್ಸವ ಪ್ರಶಸ್ತಿ'ಗೆ ಆಯ್ಕೆ ಮಾಡಿದೆ. ಈ 65 ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಆರೆಸ್ಸೆಸ್ ಹಿನ್ನೆಲೆಯ 'ಯುವ ಬ್ರಿಗೇಡ್' ಸಂಸ್ಥೆಯೂ ಸ್ಥಾನ ಪಡೆದಿದೆ.

ಆದರೆ ಸಂಘ-ಸಂಸ್ಥೆಗಳ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಆರೆಸ್ಸೆಸ್ ಹಿನ್ನೆಲೆಯ 'ಯುವ ಬ್ರಿಗೇಡ್'ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ಗೆ ಯಾವ ಕಾರಣಕ್ಕೆ ಪ್ರಶಸ್ತಿ ನೀಡಲಾಗಿದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

''ಕಳೆದ 15 ವರುಷದಲ್ಲಿ ಕರ್ನಾಟಕದಲ್ಲಿ ಯಾರೂ ಹೇಳದಷ್ಟು ಸುಳ್ಳು ಹೇಳಿರುವ, ನದಿ, ಕೆರೆ, ಹೊಂಡ, ಕಲ್ಯಾಣಿ ಶುಚಿ ಮಾಡುತ್ತೇವೆ ಎಂಬ ಕಣ್ಕಟ್ಟಿನ ಹಿಂದೆ ಯುವಕರನ್ನು ಕೋಮು ಪ್ರಚೋದನೆಗೆ ತಳ್ಳುವ ಹೆಂಗ್ ಪುಂಗ್ ಲೀ ಚಕ್ರವರ್ತಿ ಸೂಲಿಬೆಲೆಯ ಯುವ ಬ್ರಿಗೇಡ್ ಗೆ ರಾಜ್ಯೋತ್ಸವ ಪ್ರಶಸ್ತಿ! ಈ ಬ್ರಿಗೇಡ್ ನ ವೇದಿಕೆ ಬಳಸಿಕೊಂಡೇ ಕರ್ನಾಟಕವನ್ನು ಇಬ್ಬಾಗ ಮಾಡುವುದಕ್ಕೆ ಕುಮ್ಮಕ್ಕು ನೀಡುತ್ತಾನೆ. ಇಂತವರಿಗೆ ಈ ಪ್ರಶಸ್ತಿ. ಅಲ್ಲಿಗೆ, ಉದಯವಾಯಿತು ಚೆಲುವ ಕನ್ನಡ ನಾಡು'' ಎಂದು ಮಲ್ಲಿಕಾರ್ಜುನ್ ಬಿ. ಎಂಬವರು ಟ್ವೀಟ್ ಮಾಡಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಅವರ ಯುವ ಬ್ರಿಗೇಡ್ ಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ. ವೆಲ್ ಡನ್ ಯಡಿಯೂರಪ್ಪ, ಇನ್ನೂ ಇಂತಹ ಮೇಧಾವಿಗಳು ಬಹಳಷ್ಟಿದ್ದಾರೆ. ಅಂಥವರನ್ನೆಲ್ಲಾ ಗೌರವಿಸಿ. ಅದರಲ್ಲಿ ನಮ್ಮ ಯುವ ದ್ರೋಣಾಚಾರ್ಯರು ಡ್ರೋನ್ ಪ್ರತಾಪಗೂ ಕೊಡಿ.....ಸಮಾಜದಲ್ಲಿ ಓಡುವುದು ಸುಳ್ಳು ಮಾತ್ರ ಎಂದು ವಿಜಯನ್ ನಾಯಕ್ ಎಂಬವರು ತಿಳಿಸಿದ್ದಾರೆ.

#Heng_pung_lee ಖ್ಯಾತಿಯ ಸೂಲಿಬೆಲೆಯ ಯುವ ಬ್ರಿಗೇಡ್ ಗೆ ರಾಜ್ಯೋತ್ಸವ ಪ್ರಶಸ್ತಿ ಒಲಿಯಲು #ಹೆಂಗ್_ಪುಂಗ್_ಲೀ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದ್ದೇ ಮಾನದಂಡವಾಗಿರಬಹುದೇ...?! ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

''ರಾಜ್ಯೋತ್ಸವ ಪ್ರಶಸ್ತಿ ಮುಂಚೆನೇ ಫಿಕ್ಸ್ ಆಗಿತ್ತು ಅನ್ನಿಸುತ್ತಿದೆ. ಅದಕ್ಕೆ ನಂದೂ ಒಂದು ಇರಲಿ ಅಂತ ನಾಲ್ಕು ಮಾತು ಹಿಂದಿ ಹೇರಿಕೆ ಬಗ್ಗೆ ಮಾಡಿದ್ದಾರೆ. ಲಿಪಿ ಸುಧಾರಣೆ ಮಾಡುವವರನ್ನ ಮೂಲೆ ಗುಂಪು ಮಾಡಿ, ಹಿಂದಿಯನ್ನ ನೆತ್ತಿ ಮೇಲಿಟ್ಟು, ಎಲ್ಲಾ ಕೆಂದ್ರಮಯ ಅನ್ನೋರಿಗೆ ಈ ಪ್ರಶಸ್ತಿ, ಎಂತಹ ಕಾಲ ಬಂತು'' ಎಂದು ರವಿ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದು, ಸೂಲಿಬೆಲೆಯ ಫೋಟೋವೊಂದನ್ನು ಟ್ವಿಟ್ ಮಾಡಿದ್ದಾರೆ.

''ಚಕ್ರವರ್ತಿ ಸೂಲಿಬೆಲೆಗೆ ರಾಜ್ಯ ಪ್ರಶಸ್ತಿ.! ಈ ಕಾರಣಕ್ಕೆ ವಿರೋಧಿಸುವೆ: 1.ಆತ ಹಣಕ್ಕಾಗಿ ಮತ್ತು ಒಂದು ರಾಜಕೀಯ ಪಕ್ಷಕ್ಕಾಗಿ ದುಡಿದ, 2. ಸುಳ್ಳು ಹೇಳಿ ನಾಗರಿಕ ಸಮಾಜವನ್ನು ಅದರಲ್ಲೂ ಯುವಕರ ದಾರಿ ತಪ್ಪಿಸಿದ, 3. ನಿಸ್ವಾರ್ಥ ಸಮಾಜ ಸೇವಕನಲ್ಲ. ಆತ ಒಬ್ಬ ವೃತ್ತಿಪರ ಸುಳ್ಳುಗಾರ ಎಂದು ಫೇಸ್ ಬುಕ್ ನಲ್ಲಿ ದಿನೇಶ್ ಹೆಗ್ಡೆ ಎಂಬವರು ಪೋಸ್ಟ್ ಮಾಡಿದ್ದಾರೆ.

ಸಂಘ-ಸಂಸ್ಥೆಗಳ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಆರೆಸ್ಸೆಸ್ ಹಿನ್ನೆಲೆಯ 'ಯುವ ಬ್ರಿಗೇಡ್' ಸಂಸ್ಥೆಗೆ ಪ್ರಶಸ್ತಿ ಪ್ರಕಟಿಸಲಾಗಿದೆ. `ಆರೆಸ್ಸೆಸ್ ಸೇರಿದಂತೆ ಯಾವ ಸಂಘ-ಸಂಸ್ಥೆಗೂ ಪ್ರಶಸ್ತಿ ನೀಡಬಾರದೆಂಬ ನಿಯಮಗಳಿಲ್ಲ. ಆರೆಸ್ಸೆಸ್ ಕೂಡ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಯುವ ಬ್ರಿಗೇಡ್ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿಗೆ ನೀಡಲಾಗಿದೆ'

-ಸಚಿವ ಸಿ.ಟಿ.ರವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News