ಉಪ ಚುನಾವಣೆಗೆ ದಿನಗಣನೆ: ಮತದಾರರ ಮನ ಗೆಲ್ಲಲು ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ

Update: 2020-10-29 13:07 GMT

ಬೆಂಗಳೂರು, ಅ. 29: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪ್ರತಿಷ್ಠೆ ಮತ್ತು ಪೈಪೋಟಿ ಸೃಷ್ಟಿಸಿರುವ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ(ನವೆಂಬರ್ 3)ಕ್ಕೆ ದಿನಗಣನೆ ಆರಂಭವಾಗಿದೆ. ಹೀಗಾಗಿ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ, ಮುಖಂಡರ ನಡುವಿನ ಆರೋಪ-ಪ್ರತ್ಯಾರೋಪ ಜೋರಾಗಿದೆ.

ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಈ ಉಪಸಮರ ದಿಕ್ಸೂಚಿ ಎಂದೇ ಬಿಂಬಿಸಲಾಗುತ್ತಿದ್ದು, ಶತಾಯ-ಗತಾಯ ಗೆಲ್ಲಲೇಬೇಕೆಂದು ಮೂರು ರಾಜಕೀಯ ಪಕ್ಷಗಳು ನೇತಾರರು ಹಗಲು-ರಾತ್ರಿಗಳ ಪರಿವೆ ಮರೆತು ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಕೊರೋನ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಪ್ರಚಾರದಿಂದ ದೂರವೇ ಉಳಿದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ(ಅ.30)ಯಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ನವೆಂಬರ್ 1ರ ರವಿವಾರ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದ್ದು, ಕೊನೆಯ ಕ್ಷಣದಲ್ಲಿ ಮತದಾರರ ಮನ ಗೆಲ್ಲಲು ಎರಡೂ ಕ್ಷೇತ್ರಗಳಲ್ಲಿಯೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಉಪ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು, ಚಿತ್ರನಟ-ನಟಿಯರು ಮತಬೇಟೆಯಲ್ಲಿ ತೊಡಗಿದ್ದಾರೆ.

ಕುರುಡು ಕಾಂಚಾಣ: ಈ ಮಧ್ಯೆ ಎರಡೂ ಕ್ಷೇತ್ರಗಳಲ್ಲಿಯೂ ಮೂರು ರಾಜಕೀಯ ಪಕ್ಷಗಳು ಮತದಾರರಿಗೆ `ಅರಿಶಿಣ-ಕುಂಕುಮ'ದ ನೆಪ, ಆಡಳಿತದಲ್ಲಿರುವ ಸರಕಾರ, ಕ್ಷೇತ್ರಕ್ಕೆ ಸಚಿವ ಸ್ಥಾನ ಸೇರಿದಂತೆ ಹಣ, ಮದ್ಯದ ಆಮಿಷವೊಡ್ಡುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಕೊನೆಯ ಕ್ಷಣದಲ್ಲಿ ಮತದಾರರ ಮನವೊಲಿಕೆಗೆ `ಕತ್ತಲ ರಾತ್ರಿ'ಯ ಕರಾಮತ್ತು ನಡೆಸುವ ಸಾಧ್ಯತೆಗಳಿದ್ದು, ಚುನಾವಣಾ ಆಯೋಗದ ಹದ್ದಿನ ಕಣ್ಣು ತಪ್ಪಿಸುತ್ತಿರುವ ಪ್ರಕರಣಗಳು ಅಲ್ಲಲ್ಲಿ ಬಯಲಾಗುತ್ತಿವೆ.

ಕೊರೋನ ವೈರಸ್ ಸೋಂಕಿನ ನಿಯಂತ್ರಣ ಮತ್ತು ವೈಫಲ್ಯದಿಂದ ಹಿಡಿದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನ, ರೈತರ ಸಾಲಮನ್ನಾ, ಕಣ್ಣೀರಿನ ರಾಜಕೀಯ, ಅಭಿವೃದ್ಧಿಯ ಜಪ ಎಲ್ಲೆಡೆ ಕೇಳಿಬರುತ್ತಿದೆ. ಈ ವಿಚಾರಗಳು ಸೇರಿ ಕೆಲ ವೈಯಕ್ತಿಕ ಮಟ್ಟದ ವಿಷಯಗಳು ರಾಜಕೀಯ ಪಕ್ಷಗಳ ಮುಖಂಡರ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದೆ. ಆ ಮೂಲಕ ಮತದಾರರ ಓಲೈಕೆ ಭರಾಟೆಯಲ್ಲಿ ರಾಜಕೀಯ ಮುಖಂಡರು ನಿರತರಾಗಿದ್ದಾರೆ.

ಕ್ಷೇತ್ರ ಬಿಡಲು ಸೂಚನೆ: ಉಪಚುನಾವಣೆಯ ಮತದಾನ(ನ.3)ಕ್ಕೆ 48 ಗಂಟೆಯ ಮೊದಲು ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ ಅಥವಾ ವ್ಯಕ್ತಿ ರಾಜಕೀಯ ಸಭೆ, ಸಮಾರಂಭ ನಡೆಸುವಂತಿಲ್ಲ. ಕ್ಷೇತ್ರದ ಮತದಾರರಲ್ಲದವರು ಶನಿವಾರ(ಅ.31) ಕ್ಷೇತ್ರ ಬಿಟ್ಟು ತೆರಳಲು ಚುನಾವಣಾ ಆಯೋಗ ಸೂಚನೆ ನೀಡಿದೆ. ಅಲ್ಲದೆ, ಮತದಾನ ಪೂರ್ಣಗೊಳ್ಳುವ ಮೊದಲು ಯಾವುದೇ ರೀತಿಯ ಸಮೀಕ್ಷೆ(ಒಪಿನಿಯನ್ ಪೋಲ್)ಗಳಿಗೆ ನಿರ್ಬಂಧ ಹೇರಲಾಗಿದೆ.

ಆರ್.ಆರ್.ನಗರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಬಿಜೆಪಿಯ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ ಎಚ್., ಜೆಡಿಎಸ್‍ನ ಕೃಷ್ಣಮೂರ್ತಿ, ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಟಿ.ಬಿ.ಜಯಚಂದ್ರ, ಬಿಜೆಪಿಯ ಡಾ.ರಾಜೇಶ್‍ಗೌಡ ಹಾಗೂ ಜೆಡಿಎಸ್ ಅಮ್ಮಾಜಮ್ಮ ಸೇರಿದಂತೆ ಘಟಾನುಘಟಿಗಳು ಉಪಚುನಾವಣಾ ಕಣದಲ್ಲಿದ್ದಾರೆ. ನ.3ರ ಮತದಾನ ನಡೆಯಲಿದ್ದು, ಮತದಾರ ಯಾರಿಗೆ ವಿಜಯಮಾಲೆ ಹಾಕಲಿದ್ದಾನೆಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಆರ್.ಆರ್.ನಗರದಲ್ಲಿ ಮದ್ಯ ಮಾರಾಟ ನಿಷೇಧ

ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ(ನ.3) ಹಿನ್ನೆಲೆಯಲ್ಲಿ ನ.1ರ ಸಂಜೆ 5ಗಂಟೆಯಿಂದ ನ.3ರ ಮಧ್ಯರಾತ್ರಿ 12ಗಂಟೆಯ ವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಜೊತೆಗೆ ಮತದಾನಕ್ಕೆ 48 ಗಂಟೆ ಮೊದಲು ಮುನ್ನಚ್ಚರಿಕೆ ಕ್ರಮವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 5ಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಸಭೆ, ಸಮಾರಂಭ, ಮೆರವಣಿಗೆ ನಿರ್ಬಂಧಿಸಲಾಗಿದೆ. ಮಾರಕಾಸ್ತ್ರ ಒಯ್ಯುವಂತಿಲ್ಲ. ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ. ಆದರೆ, ಆಯೋಗದ ಮಾರ್ಗಸೂಚಿ ಅನ್ವಯ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮನೆ ಮನೆ ಪ್ರಚಾರಕ್ಕೆ ನಿಷೇಧಾಜ್ಞೆಯಿಂದ ವಿನಾಯಿತಿ ನೀಡಲಾಗಿದೆ'

-ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News