'ರಾಜ್ಯದ ಅಭಿವೃದ್ಧಿಯಲ್ಲಿ ವಿಫಲ': ಸಂಸದರು, ಸಚಿವರ ಭಾವಚಿತ್ರ ಹರಾಜಿಗಿಟ್ಟು ಪ್ರತಿಭಟನೆ

Update: 2020-10-29 15:14 GMT

ಬೆಂಗಳೂರು, ಅ.29: ರಾಜ್ಯದ ಅಭಿವೃದ್ಧಿಗೆ ಶ್ರಮಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಸಂಸದರು ಹಾಗೂ ಸಚಿವರ ಭಾವಚಿತ್ರಗಳನ್ನು ಹರಾಜು ಹಾಕುವ ಮೂಲಕ ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಪ್ರತಿಭಟನೆ ನಡೆಸಿದರು.

ಉತ್ತರ ಕರ್ನಾಟಕದಲ್ಲಿ ನೆರೆ ಹಾಗೂ ಪ್ರವಾಹದಿಂದಾಗಿ ಜನರು ಜೀವಿಸಲು ಕಷ್ಟ ಪಡುವಂತಾಗಿದೆ. ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರದ ಗಮನ ಸೆಳೆಯುವಲ್ಲಿ ರಾಜ್ಯದ ಸಂಸದರು ಹಾಗೂ ಸಚಿವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಈ ಜನಪ್ರತಿನಿಧಿಗಳಿಗೆ ರಾಜ್ಯದ ಜನರ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಅವರು ಆಪಾದಿಸಿದರು.

ಈ ಬಾರಿ ಕನಿಷ್ಠ 50 ಸಾವಿರ ಕೋಟಿ ರೂ. ನಷ್ಟವಾಗಿದೆ. ಆದರೆ, ಸರಕಾರಗಳು ರೈತರು, ಬಡವರು, ಕೂಲಿ ಕಾರ್ಮಿಕರ ನೆರವಿಗೆ ಮುಂದಾಗಿಲ್ಲ. ಇದು ಅತ್ಯಂತ ಖಂಡನೀಯವಾದುದು. ರಾಜ್ಯದ ಜನಪ್ರತಿನಿಧಿಗಳು ಒಂದೊಂದು ರೂಪಾಯಿಗೂ ಮಾರಾಟವಾಗುವ ಯೋಗ್ಯತೆಯಿಲ್ಲದವರು. ಕೂಡಲೇ ಎಲ್ಲರೂ ರಾಜೀನಾಮೆ ಕೊಟ್ಟು ಅಧಿಕಾರದಿಂದ ತೊಲಗಲಿ ಎಂದು ಒತ್ತಾಯಿಸಿದರು.

ಐದು ರೂಪಾಯಿಗೆ ಹಣಕಾಸು ಸಚಿವೆಯ ಹರಾಜು: ಸಂಸದರ ಭಾವಚಿತ್ರವನ್ನಿಟ್ಟು ಒಂದು ರೂಪಾಯಿ ಆರಂಭಿಕ ಬೆಲೆಯಿಂದ ಹರಾಜು ಆರಂಭಿಸಿದರು. ಈ ನಡುವೆ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭಾವಚಿತ್ರವನ್ನು ವ್ಯಕ್ತಿಯೊಬ್ಬ ಐದು ರೂಪಾಯಿಗಳು ನೀಡಿ ಭಾವಚಿತ್ರವನ್ನು ಖರೀದಿಸಿದರು. ಇದೇ ವೇಳೆಯಲ್ಲಿ ಮತ್ತೊಬ್ಬ ಸಣ್ಣ ಹುಡುಗ ಸಂಸದ ಸಂಗಣ್ಣ ಕರಡಿ ಚಿತ್ರವನ್ನು ಕೇವಲ ಒಂದು ರೂಪಾಯಿಗೆ ಹರಾಜು ಹಾಕಿ ಖರೀದಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News