ಆಯ್ಕೆ ಸಮಿತಿಗೆ ಜೆರಾಕ್ಸ್ ಪ್ರತಿಗಳ ಸಲ್ಲಿಕೆ: 230 ಪ್ರಕಾಶನಗಳಿಗೆ ನೊಟೀಸ್

Update: 2020-10-29 14:00 GMT

ಬೆಂಗಳೂರು, ಅ.29: ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಆಯ್ಕೆ ಮಾಡುವ ಸಲುವಾಗಿ ಪುಸ್ತಕ ಆಯ್ಕೆ ಸಮಿತಿಯು 2018 ನೇ ಸಾಲಿನ ಆಯ್ಕೆ ಪ್ರಕ್ರಿಯೆ ನಡೆಸಿದ ವೇಳೆಯಲ್ಲಿ ಹಲವು ಜೆರಾಕ್ಸ್ ಪ್ರತಿಗಳು ಕಾಣಿಸಿಕೊಂಡಿದ್ದು, ಸುಮಾರು 230 ಕ್ಕೂ ಅಧಿಕ ಪ್ರಕಾಶಕರಿಗೆ ಗ್ರಂಥಾಲಯ ಇಲಾಖೆ ನೋಟಿಸ್ ನೀಡಲಾಗಿದೆ.

ಅಗತ್ಯವಿರುವ ಹಾಗೂ ಅರ್ಹ ಪುಸ್ತಕಗಳನ್ನು ಆರಿಸಿಕೊಳ್ಳುವಂತಹ ಸಂದರ್ಭದಲ್ಲಿ ಆಯ್ಕೆ ಪ್ರಕ್ರಿಯೆಗೆ ಜೆರಾಕ್ಸ್ ಪ್ರತಿ ಅಥವಾ ಹಳೆಯ ಪುಸ್ತಕಗಳನ್ನು ಹೊಸದಾಗಿ ಮುದ್ರಿಸಿ ಸಲ್ಲಿಸಿದ್ದಾರೆ ಎಂಬ ಅಪವಾದಗಳು ಕೇಳಿಬಂದಿವೆ. ಸಾಹಿತಿ ದೊಡ್ಡರಂಗೇಗೌಡರ ನೇತೃತ್ವದಲ್ಲಿನ ಆಯ್ಕೆ ಸಮಿತಿಯು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪುಸ್ತಕದ ಆಯ್ಕೆ ಪ್ರಕ್ರಿಯೆಯನ್ನು ಇತ್ತೀಚೆಗೆ ನಡೆಸಲಾಗಿದೆ.

ವಿವಿಧ ಪ್ರಕಾಶಕರು ಪ್ರಕಟಿಸಿರುವ 7 ಸಾವಿರಕ್ಕೂ ಅಧಿಕ ಶೀರ್ಷಿಕೆಗಳು ಆಯ್ಕೆಗೆ ಬಂದಿದ್ದವು. ಪುಸ್ತಕಗಳಿಗೆ ಬಳಸಲಾದ ಕಾಗದದ ಗುಣಮಟ್ಟ, ಅವುಗಳ ಗಾತ್ರ, ಮುಖಪುಟದ ವಿನ್ಯಾಸವನ್ನು ಆಧರಿಸಿ ಸಮಿತಿಯಲ್ಲಿನ ಪರಿಣಿತರು ನಕಲು ಪ್ರತಿಗಳನ್ನು ಗುರುತಿಸಿದ್ದಾರೆ.

ಕರ್ನಾಟಕದಲ್ಲಿ ಅಂದಾಜು 500 ಕ್ಕೂ ಅಧಿಕ ಪ್ರಕಾಶನಗಳಿವೆ. ವಾರ್ಷಿಕವಾಗಿ 7-8 ಸಾವಿರ ಪುಸ್ತಕಗಳು ಪ್ರಕಟವಾಗುತ್ತವೆ. ಗ್ರಂಥಾಲಯ ಇಲಾಖೆಯು ಪ್ರತಿ ಶೀರ್ಷಿಕೆಯಡಿ 300 ಪ್ರತಿಗಳನ್ನಷ್ಟೇ ಖರೀದಿಸುತ್ತದೆ. ಅದಕ್ಕೆ ಪ್ರತಿವರ್ಷ 15 ಕೋಟಿ ಹಣವನ್ನು ವೆಚ್ಚ ಮಾಡಲಾಗುತ್ತದೆ.

ಪಾರದರ್ಶಕತೆಗೆ ಒತ್ತು: ಮುಂದಿನ ದಿನಗಳಲ್ಲಿ ಆಯ್ಕೆಗೆ ಸಲ್ಲಿಸುವ ವೇಳೆ 5 ಪ್ರತಿಗಳ ಜತೆಗೆ ಸಾವಿರ ಪ್ರತಿಗಳನ್ನು ಸಿದ್ಧಪಡಿಸಿಕೊಂಡಿರಬೇಕು ಎಂದು ಸೂಚಿಸಲಾಗುತ್ತದೆ. ಇದರಿಂದ ಜೆರಾಕ್ಸ್ ಪ್ರತಿಗಳನ್ನು ತಡೆಯಬಹುದು ಹಾಗೂ ಅಕ್ರಮವಾಗಿ ಒಳ ನುಸುಳುವುದನ್ನು ತಡೆಯಲಾಗುವುದು ಎಂದು ಸಮಿತಿ ಅಧ್ಯಕ್ಷ ದೊಡ್ಡರಂಗೇಗೌಡ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News