ಹೆಚ್ಚುತ್ತಿರುವ ಅಪರಾಧ ಚಟುವಟಿಕೆ: ರಾಜ್ಯದ ಎಲ್ಲೆಡೆ ಸಿಸಿ ಕ್ಯಾಮೆರಾಗಳ ಕಣ್ಗಾವಲು

Update: 2020-10-29 14:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.29: ಇತ್ತೀಚೆಗೆ ರಾಜ್ಯದ ನಗರ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಎಲ್ಲೆಡೆ ಖಾಕಿ ಅಲರ್ಟ್ ಆಗಿದೆ. ಪೊಲೀಸರು ಭದ್ರತೆ ದೃಷ್ಟಿಯಿಂದ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಆದರೂ ಪೊಲೀಸರ ಕಣ್ತಪ್ಪಿ ಕೆಲ ಅಪರಾಧಗಳು ನಡೆದು ಬಿಡುತ್ತವೆ. ಹೀಗಾಗಿ ಸಿಸಿಟಿವಿ ಕ್ಯಾಮರಾಗಳ ಮೂಲಕ ರಾಜ್ಯದೆಲ್ಲೆಡೆ ಹದ್ದಿನ ಕಣ್ಣು ಇಡಲಾಗಿದೆ.

ಹಲವಾರು ಅಪರಾಧಗಳನ್ನ ಪತ್ತೆ ಮಾಡಲು ಸಿಸಿಟಿವಿ ಬಹಳ ಉಪಯೋಗಕಾರಿಯಾಗಿದೆ. ಪುಡಿ ರೌಡಿಗಳ ಅಟ್ಟಹಾಸ, ಕೋಮು ಗಲಭೆ, ಗಲಾಟೆ, ಸರಗಳ್ಳತನ, ಬೈಕ್ ಕಾರು ಕಳ್ಳತನ, ಮನೆ ಕಳ್ಳತನ, ಅಪಹರಣ ಸೇರಿ ಹಲವು ರೀತಿಯ ಕ್ರೈಂಗಳು ನಡೆದಾಗ, ಪೊಲೀಸರಿಗೆ ಸಿಸಿಟಿವಿ ಬಹಳ ಸಹಕಾರಿಯಾಗುತ್ತಿದೆ.

ಇನ್ನು ಪೊಲೀಸರ ಕಣ್ಗಾವಲಿನಲ್ಲಿ ರಾಜಧಾನಿಯಲ್ಲಿ ಸುಮಾರು 579 ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ. ಹಾಗೂ ಸಿಲಿಕಾನ್ ಸಿಟಿಗೆ ಹೆಚ್ಚಿನ ಭದ್ರತೆ ನೀಡುವ ದೃಷ್ಟಿಯಿಂದ, 7,500 ಸಿಸಿ ಕ್ಯಾಮೆರಾ ಅಳವಡಿಸಲು ಸರಕಾರಕ್ಕೆ ಮನವಿ ಮಾಡಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ಸದ್ಯ ನಾಲ್ಕು ಮಾದರಿ ಕ್ಯಾಮೆರಾಗಳಿವೆ. ಮ್ಯಾಟ್ರಿನೆಕ್ಸ್, ಬುಲೆಟ್ ಕ್ಯಾಮೆರಾ, ಎಎನ್ಪಿಆರ್, ಎಫ್‍ಆರ್‍ಎ ಕ್ಯಾಮೆರಾಗಳಿದ್ದು, ಈ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯವನ್ನು, ಹದ್ದಿನ ಕಣ್ಣಿನ ರೀತಿಯಲ್ಲಿ ನಗರದ ಕಮೀಷನರ್ ಕಚೇರಿ ಹಾಗೂ ಟ್ರಾಫಿಕ್ ಆಯುಕ್ತರ ಕಚೇರಿಯಲ್ಲಿ ವೀಕ್ಷಣೆ ಮಾಡಲಾಗುತ್ತದೆ. ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂತ್ ಜವಾಬ್ದಾರಿ ಹೊತ್ತು, ನಗರದ ಪ್ರತಿ ದಿನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವಳಿಗಳನ್ನ ಮಾನಿಟರ್ ಮಾಡಲಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ ನೂರಾರು ಸಿಸಿ ಕ್ಯಾಮೆರಾಗಳನ್ನ ಅಳವಡಿಕೆ ಮಾಡಲಾಗಿದೆ. ಆದರೆ, ಪೊಲೀಸ್ ಇಲಾಖೆಯಿಂದ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ತಾಂತ್ರಿಕ ಸಮಸ್ಯೆಯಿಂದ ಕಣ್ಮುಚ್ಚಿವೆ. ನಗರದ ನಾನಾ ಕಡೆಗಳಲ್ಲಿ ಪೊಲೀಸ್ ಇಲಾಖೆಯಿಂದ 19 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಳೆದ ವರ್ಷದಿಂದ ಅವುಗಳು ತಾಂತ್ರಿಕ ದೋಷ ಕಾಣಿಸಿಕೊಂಡು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

ಖಾಸಗಿ ಕಂಪನಿಗಳ ಮೂಲಕ ಕ್ಯಾಮೆರಾಗಳನ್ನು ಸರಿಪಡಿಸಲು, ಪೊಲೀಸ್ ಇಲಾಖೆಯಿಂದ ಸಂಬಂಧಿಸಿದ ಮೇಲಧಿಕಾರಿಗಳಿಂದ ಹಲವು ತಿಂಗಳಿಂದ ಪತ್ರ ಬರೆಯಲಾಗಿದೆ. ಆದರೆ ಇದುವರೆಗೆ ಸ್ಪಂದನ ದೊರೆಯದ ಕಾರಣ ಕೆಲವು ಕಡೆ ಸಿಸಿ ಕ್ಯಾಮರಾಗಳು ಕಣ್ಣು ತೆರೆಯುತ್ತಿಲ್ಲ.

ವಿಜಯಪುರ ನಗರದಲ್ಲಿ ಶಿವಾಜಿ ವೃತ್ತ, ಗಾಂಧಿ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮಾತ್ರ ಸಿಸಿ ಕ್ಯಾಮೆರಾಗಳು ಇವೆ. ನಗರದ ಒಳ ಬಡಾವಣೆಗಳಿಗೆ ಕ್ಯಾಮೆರಾಗಳ ಕೊರತೆಯಿಂದ ದರೋಡೆ, ಕೊಲೆ ಸೇರಿದಂತೆ ಹಲವು ಕೃತ್ಯಗಳು ನಡೆಯುತ್ತಿವೆ. ಆದರೆ, ಈಗಾಗಲೇ ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದ್ದು, ಹೆಚ್ಚು ಅಪರಾಧ ಪ್ರಕರಣಗಳು ನಡೆಸುವ ಸ್ಥಳಗಳಲ್ಲಿ ಹೆಚ್ಚಿನ ಕ್ಯಾಮೆರಾಗಳನ್ನು ಹಾಕಲು ಮುಂದಾಗುತ್ತೇವೆ ಎನ್ನುತ್ತಾರೆ ಎಸ್ಪಿ ಅನುಪಮ್ ಅಗರವಾಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News