ಬಿಜೆಪಿ ಕಾರ್ಯಕರ್ತ ದಿನೇಶ್ ಬಂಟ್ವಾಳ್ ಮೇಲಿನ ಹಲ್ಲೆ ಮತೀಯ ಗಲಭೆಯ ಸಂಚು: ನಳಿನ್ ಕುಮಾರ್

Update: 2020-10-29 15:55 GMT

ಚಿಕ್ಕಮಗಳೂರು, ಅ.29: ಬಿಜೆಪಿ ಕಾರ್ಯಕರ್ತ ದಿನೇಶ್ ಬಂಟ್ವಾಳ್ ಮೇಲಿನ ಹಲ್ಲೆ, ವೈಯಕ್ತಿಕ ದ್ವೇಷವಲ್ಲ. ಇದು ಮತೀಯ ಗಲಭೆ ಸೃಷ್ಟಿಸಲು ನಡೆಸಿದ ಸಂಚು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಪಕ್ಷದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುವಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲ್ಲೆ ಘಟನೆ ಸಂಬಂಧ ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದು, ಹಲ್ಲೆ ಹಿಂದೆ ಯಾವ ಸಂಘಟನೆ ಇದೆ ಎಂಬುದನ್ನು ಪತ್ತೆ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳ ಅಭಿವೃದ್ಧಿ ಕೆಲಸ ಮುಂದಿಟ್ಟು ಆರ್.ಆರ್.ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಜನರ ಬಳಿಗೆ ಹೋಗುತ್ತಿದ್ದೇವೆ. ದೇಶದ ಅಭಿವೃದ್ಧಿಗೆ ಬಿಜೆಪಿ ಅನಿವಾರ್ಯ ಎಂಬ ಮನೋಭಾವ ಮತದಾರಲ್ಲಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಕಟೀಲು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಭಿವೃದ್ಧಿಯನ್ನು ಮತದಾರರ ಮುಂದಿಟ್ಟಿದ್ದೇವೆ. ಈ ಕ್ಷೇತ್ರಗಳಲ್ಲಿ ಹಲವು ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೂ ಕ್ಷೇತ್ರಗಳ ಅಭಿವೃದ್ಧಿಗೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಅಲ್ಲಿನ ಮತದಾರರೇ ಹೇಳುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ವಿರುದ್ಧ ಅಲ್ಲಿನ ಜನರು ಆಕ್ರೋಶಗೊಂಡಿದ್ದು, ಬಿಜೆಪಿಯತ್ತ ಒಲವು ತೋರಿದ್ದಾರೆ ಎಂದರು.

ಸೋಲಿನ ಭೀತಿಯಿಂದಾಗಿ ವಿಪಕ್ಷಗಳು ಜಾತಿ ರಾಜಕಾರಣ ಮಾಡುತ್ತಿವೆ. ಚುನಾವಣೆ ಬಂದಾಗ ಮಾತ್ರ ವಿಪಕ್ಷಗಳ ಮುಖಂಡರಿಗೆ ಜಾತಿ ನೆನಪಾಗುತ್ತದೆ. ಚುನಾವಣೆ ಮುಗಿದ ಮೇಲೆ ಅಧಿಕಾರ ಉಳಿಸಿಕೊಳ್ಳುವುದು ಹೇಗೆಂಬ ಚಿಂತೆ ಅವರದ್ದು. ಬಿಜೆಪಿ ಅಭಿವೃದ್ಧಿ ಮಂತ್ರದಿಂದ ಮಾತ್ರ ಗೆಲುವು ಸಾಧಿಸಲಿದೆಯೇ ಹೊರತು ಜಾತಿಯ ಆಧಾರದ ಮೇಲಲ್ಲ. ಆರ್.ಆರ್.ನಗರದಲ್ಲಿ ಚುನಾವಣೆ ವೇಗ ಪಡೆದುಕೊಂಡಿದೆ. 50 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಶಿರಾ ಕ್ಷೇತ್ರದಲ್ಲಿ 15 ರಿಂದ 20 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಪಡೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ವಿಶ್ವಾಸ ವ್ಯಕ್ತಪಡಿಸಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ನಳಿನ್‍ಕುಮಾರ್ ಕಟೀಲು, ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದೆ. ರಾಜ್ಯದಲ್ಲಿ 117 ಸ್ಥಾನ ಪಡೆದುಕೊಂಡಿದ್ದು, ಉಪಚುನಾವಣೆಯಲ್ಲಿ ಒಳ ಒಪ್ಪಂದದ ಪ್ರಶ್ನೆಯೇ ಇಲ್ಲ. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿಗೆ ಪ್ರಬಲ ಸ್ಫರ್ಧಿಯಾಗಿದೆ. ಜೆಡಿಎಸ್ ಮೂರನೇ ಸ್ಥಾನದಲ್ಲಿದೆ ಎಂದರು.

ರಾಜ್ಯಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಅನುದಾನ ನೀಡಿದೆ
ಕೇಂದ್ರ ಸರಕಾರ ಅನುದಾನದ ಬಿಡುಗಡೆ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ತರತಮ್ಯ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ನಳಿನ್‍ ಕುಮಾರ್ ಕಟೀಲು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವಧಿಯಲ್ಲೂ ರಾಜ್ಯದಲ್ಲಿ ನೆರೆ ಬಂದಿತ್ತು. ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದರೇ ಹೊರತು ನೆರೆ ಪರಿಹಾರ ನೀಡಿರಲಿಲ್ಲ. ಆದರೆ ಯಡಿಯೂರಪ್ಪ ನೇತೃತ್ವದ ಈಗಿನ ಸರಕಾರ ಎನ್‍ಡಿಆರ್‍ಎಫ್ ಗೈಡ್‍ಲೈನ್ ಮೀರಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಿದ್ದು, 1ಲಕ್ಷ ರೂ. ಪರಿಹಾರವನ್ನು ಆರಂಭದಲ್ಲೇ ಬಿಡುಗಡೆ ಮಾಡಿದೆ. ಸಂತ್ರಸ್ತರ ಪೈಕಿ ಕೆಲವರು ಮನೆ ನಿರ್ಮಾಣ ಕಾಮಗಾರಿ ನಡೆಸದಿರುವುದರಿಂದ ಹಣ ಬಂದಿಲ್ಲ. ಕೆಲವು ಕಡೆಗಳಲ್ಲಿ ನಿವೇಶನ ಸಮಸ್ಯೆಯಿಂದ ಮನೆ ನಿರ್ಮಾಣ ಕೆಲಸ ವಿಳಂಬವಾಗಿದೆ ಎಂದರು. 

ಕೇಂದ್ರ ಸರಕಾರ ಹಿಂದೆಂದಿಗಿಂತಲೂ ಈ ಬಾರಿ ರಾಜ್ಯ ಸರಕಾರಕ್ಕೆ ಹೆಚ್ಚು ಅನುದಾನ ನೀಡಿದೆ. ಎನ್‍ಡಿಆರ್‍ಎಫ್ ಗೈಡ್‍ಲೈನ್‍ನಂತೆ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿದೆ. ಇತ್ತೀಚೆಗೆ ನೆರೆಬಂದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಜನತೆಯೊಂದಿಗೆ ನಾವಿದ್ದೇವೆ ಎಂದರು. ಹಾಗೆಂದ ಮಾತ್ರಕ್ಕೆ ಬೇಕಾಬಿಟ್ಟಿ ಹಣ ನೀಡಲು ಸಾಧ್ಯವಿಲ್ಲ, ವರದಿ ನೀಡಬೇಕು. ಕೇಂದ್ರ ತಜ್ಞರ ತಂಡ ಪರಿಶೀಲನೆ ಮಾಡಿ ವರದಿ ನೀಡಬೇಕು. ಎನ್.ಡಿ.ಆರ್.ಎಫ್ ಗೈಡ್‍ಲೈನ್ ಇರುತ್ತೆ, ಇದೆಲ್ಲ ಮುಖ್ಯಮಂತ್ರಿಯಾದವರಿಗೆ ಗೊತ್ತಿರುತ್ತದೆ. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಕಟೀಲು ಆರೋಪಿಸಿದರು.

ಸಿದ್ದರಾಮಣ್ಣನಿಗೆ ಧಮ್ ಇರಲಿಲ್ವಾ: ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿತ್ತು. ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಿದ್ದರು. ರಾಜ್ಯಕ್ಕೆ ಚಿದಂಬರಂ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಒಂದು ನಿಮಿಷದಲ್ಲಿ ಚಿದಂಬರಂ ಎದ್ದು ಹೋದರು. ಅನುದಾನ ಕೇಳಲು ಸಿದ್ದರಾಮಣ್ಣ ಅವರಿಗೆ ಧಮ್ ಇರಲಿಲ್ವಾ? ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಡಿಸ್, ಹರಿಪ್ರಸಾದ್‍ನಂತಹ ದೊಡ್ಡ ನೇತಾರರು ಚಿದಂಬರಂ ಮನವೊಲಿಸಿ ರಾಜ್ಯಕ್ಕೆ ಅನುದಾನ ತರಲು ಏಕೆ ಸಾಧ್ಯವಾಗಲಿಲ್ಲ ಎಂದು ಇದೇ ವೇಳೆ ಕಟೀಲು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News