ಸಿಂಗಂದೂರು ಹಣಕಾಸು ಹೊಣೆ ಡಿಸಿ ಹೆಗಲಿಗೆ: ದೇವಸ್ಥಾನದ ಸಲಹಾ ಸಮಿತಿ ಸಭೆ ನಿರ್ಣಯ

Update: 2020-10-29 16:03 GMT

ಶಿವಮೊಗ್ಗ: ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದ ಹಣಕಾಸು ವ್ಯವಹಾರವನ್ನು ಜಿಲ್ಲಾಧಿಕಾರಿಗೆ ವಹಿಸಲು ದೇವಸ್ಥಾನದ ಸಲಹಾ ಸಮಿತಿ ನಿರ್ಧರಿಸಿದೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ತಾತ್ಕಾಲಿಕ ಸಲಹಾ ಸಮಿತಿ ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು. 

ದೇಗುಲದಲ್ಲಿ ಆಡಳಿತ ಮಂಡಳಿ ಮತ್ತು ಅರ್ಚಕರ ನಡುವೆ ಕೆಲ ಭಿನ್ನಾಭಿಪ್ರಾಯಗಳಿದ್ದವು. ಇದನ್ನು ಮನಗಂಡ ಸರಕಾರ ತಾತ್ಕಾಲಿಕವಾಗಿ ಸಲಹಾ ಸಮಿತಿಯನ್ನು ರಚನೆ ಮಾಡಿತ್ತು. ಅದರ ಮೊದಲ ಸಭೆ ಇದಾಗಿದೆ. ಈ ಸಮಿತಿ ಪ್ರತೀ ತಿಂಗಳೂ ಸಭೆ ನಡೆಸಲಿದೆ ಎಂದು ಈಶ್ವರಪ್ಪ ಹೇಳಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಧರ್ಮದರ್ಶಿ ರಾಮಪ್ಪ ಹಾಗೂ ಅರ್ಚಕ ಶೇಷಗಿರಿ ಭಟ್ ಅವರ ನಡುವಿನ ವ್ಯತ್ಯಾಸ ಮತ್ತು ದೇವಾಲಯದ ನಿತ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ರಾಮಪ್ಪ ಅವರ ಕುಟುಂಬ ಹಿಂದಿನಿಂದಲೂ ದೇವಾಲಯದ ಆಡಳಿತ ನಡೆಸಿಕೊಂಡು ಬಂದಿದೆ. ಶೇಷಗಿರಿ ಭಟ್ ಕುಟುಂಬವೂ ಪೂಜೆ ಮಾಡಿ ಮಾಡಿಕೊಂಡು ಬಂದಿದೆ. ಸಿಗಂದೂರು ಚೌಡೇಶ್ವರಿ ದೇವಿಗೆ ರಾಜ್ಯ ಹಾಗೂ ದೇಶದೆಲ್ಲೆಡೆ ಅಪಾರ ಭಕ್ತರ ಸಮೂಹ ಇದೆ. ದೇವಾಲಯದ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ಸಮಿತಿಯ ಕರ್ತವ್ಯವಾಗಿದೆ ಎಂಬುದನ್ನು ಮನಗಂಡು ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ನಾಳೆಯಿಂದಲೇ ದೇವಸ್ಥಾನದಲ್ಲಿ ಒಂದು ಸಣ್ಣ ರಶೀದಿ ಹಾಕಿದರೂ ಅದು ಜಿಲ್ಲಾಧಿಕಾರಿಗಳ ಗಮನಕ್ಕೆ ಬರಬೇಕು. ಅಲ್ಲಿನ ಪೂಜೆ, ವಸತಿ, ಅನ್ನದಾಸೋಹ ಎಲ್ಲವೂ ಈಗಿನಂತಲೇ ನಡೆಯಲಿದೆ. ಧರ್ಮದರ್ಶಿಯಾಗಿ ರಾಮಪ್ಪ ಹಾಗೂ ಅರ್ಚಕರಾಗಿ ಶೇಷಗಿರಿಭಟ್ ಮುಂದುವರಿಯಲಿದ್ದಾರೆ. ದೇಗುಲದಲ್ಲಿ ಸುಮಾರು 100 ಮಂದಿ ಸಿಬ್ಬಂದಿಗಳಿದ್ದು, ಎಲ್ಲರಿಗೂ ವೇತನ, ದೇವಸ್ಥಾನದ ನಿರ್ವಹಣೆಗೆ ಬಳಕೆಯಾಗುವ ಅನುದಾನ ಎಲ್ಲವೂ ಹಿಂದಿನಂತೆಯೇ ನಡೆಯಲಿದೆ. ದೇಗುಲದಲ್ಲಿನ ಹಣಕಾಸು ವಹಿವಾಟು ಪಾರದರ್ಶಕವಾಗಿಲ್ಲದ ಕಾರಣ ಅದನ್ನು ಸರಿದಾರಿಗೆ ತರುವಲ್ಲಿ ಜಿಲ್ಲಾಧಿಕಾರಿಗಳು ಕ್ರಮವಹಿಸಲಿದ್ದಾರೆ. ಅಲ್ಲಿನ ಸಿಬ್ಬಂದಿಯನ್ನು ಬಳಸಿಕೊಂಡು ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಅದು ಸಾಧ್ಯವಾಗದಿದ್ದಲ್ಲಿ ಬೇರೆ ಸಿಬ್ಬಂದಿ ನೇಮಿಸಿಕೊಳ್ಳುವುದು ಜಿಲ್ಲಾಧಿಕಾರಿ ವಿವೇಚನೆಗೊಳಪಡಲಿದೆ ಎಂದು ಈಶ್ವರಪ್ಪ ವಿವರಿಸಿದರು.

ದೇಗುಲದ ಅರಣ್ಯ ಒತ್ತುವರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಹಲವು ಕಡೆ ಪರಿಸರ ಹೋರಾಟಗಾರರು ಈ ರೀತಿಯ ಪ್ರಶ್ನೆ ಎತ್ತಿದ್ದಾರೆ. ಅದನ್ನು ತಪ್ಪು ಎಂದು ಹೇಳಲಾಗದು. ಸಿಗಂದೂರಿನಲ್ಲಿ ಸದ್ಯಕ್ಕೆ ಭಕ್ತರ ಭಾವನೆ ಹಾಗೂ ಪೂಜೆಗೆ ಧಕ್ಕೆಯಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಹರಕೆ ಒಪ್ಪಿಸಲು ಬರುವ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು. ಸಿಗಂದೂರು ಚೌಡೇಶ್ವರಿ ದೇಗುಲದ ಆಡಳಿತ ಕಾನೂನು ಬದ್ಧವಾಗಿ ನಡೆಯಬೇಕು ಎಂಬುದು ಎಲ್ಲರ ಆಶಯವಾಗಿದೆ. ದೇವಾಲಯದ ಟ್ರಸ್ಟ್ ಹಾಗೆಯೇ ಇರಲಿದೆ ಎಂದೂ ಸಚಿವ ಈಶ್ವರಪ್ಪ ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಾಗರ ಎ.ಸಿ.ನಾಗರಾಜ ನಾಯ್ಕ, ಧರ್ಮದರ್ಶಿ ಡಾ.ರಾಮಪ್ಪ, ಶೇಷಗಿರಿಭಟ್ ಹಾಗೂ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News