ರಾಜ್ಯವನ್ನು ದಿವಾಳಿ ಅಂಚಿಗೆ ತಂದ ಬಿಜೆಪಿ ಸರಕಾರ: ಸಿದ್ದರಾಮಯ್ಯ ಆಕ್ರೋಶ

Update: 2020-10-29 16:35 GMT

ತುಮಕೂರು, ಅ.29: ಕೇವಲ 13 ತಿಂಗಳಲ್ಲಿ 83 ಸಾವಿರ ಕೋಟಿ ರೂ ಸಾಲ ಮಾಡಿ ರಾಜ್ಯವನ್ನು ದಿವಾಳಿ ಅಂಚಿಗೆ ತಂದಿರುವ ಬಿಜೆಪಿ ಪಕ್ಷವನ್ನು ಶಿರಾ ಮತ್ತು ಅರ್.ಆರ್.ನಗರ ಉಪಚುನಾವಣೆಯಲ್ಲಿ ರಾಜ್ಯದ ಜನತೆ ತಿರಸ್ಕರಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಪ್ರಚಾರಕ್ಕೆ ಆಗಮಿಸಿರುವ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಜೆಟ್‍ನ ವೇಳೆ 33 ಸಾವಿರ ಕೋಟಿ ಹಾಗೂ ಈ ಸಾಲಿನಲ್ಲಿ 53 ಸಾವಿರ ಕೋಟಿ ರೂ ಸಾಲ ಮಾಡಿ, ರಾಜ್ಯದ ಜನರ ಮೇಲೆ ದೊಡ್ಡ ಸಾಲದ ಹೊರೆ ಹೊರಿಸಿದ್ದಾರೆ. ಈ ಹಣವನ್ನು ಎಲ್ಲಿ ಬಳಕೆ ಮಾಡಿದ್ದಾರೆ ಎಂಬ ಮಾಹಿತಿ ಇದುವರೆಗೂ ಇಲ್ಲ. ಕೋವಿಡ್ ಹೆಸರಿನಲ್ಲಿಯೂ ಹಣ ಮಾಡಿ ಜನತೆಗೆ ದ್ರೋಹ ಎಸಗಿದ್ದಾರೆ. ಹಾಗಾಗಿ ಯುವಕರು ಬಿಜೆಪಿ ಪಕ್ಷದ ಬಗ್ಗೆ ನಿರಾಸಕ್ತಿ ಹೊಂದಿದ್ದು, ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಾಗೋಪುರದಿಂದ ಭ್ರಮನಿರಸನಗೊಂಡಿರುವ ಯುವಕ-ಯುವತಿಯರು ಶಿರಾ ಮತ್ತು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡಲಿದ್ದಾರೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಿರುವುದು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಮುನ್ಸೂಚನೆಯಾಗಿದೆ. ಪ್ರಧಾನಿ ಮೋದಿಯವರ ಭರವಸೆಗಳಿಂದ ಬೇಸರಗೊಂಡಿರುವ ಯುವಕ-ಯುವತಿಯರು, ನಿರುದ್ಯೋಗಿಗಳು ಬಿಜೆಪಿ ವಿರುದ್ಧವಾಗಿದ್ದಾರೆ. ಮೋದಿಯಿಂದ ಉದ್ಯೋಗ ಸೃಷ್ಠಿಯಾಗಲಿಲ್ಲ, ಅಸಹಾಯಕತೆಯಿಂದ ಪಕೋಡ ಮಾರಿ ಎನ್ನುವ ಬೇಜವಾಬ್ದಾರಿ ಪ್ರಧಾನಿ ಮಾತುಗಳಿಂದ ಯುವಕರು ಬೇಸರಗೊಂಡಿದ್ದಾರೆ. ನೋಟು ಅಮಾನೀಕರಣ, ಜಿಎಸ್‍ಟಿ, ಕೊರೋನದಿಂದ ನಿರುದ್ಯೋಗ ಪ್ರಮಾಣ ಹೆಚ್ಚಳವಾಗುತ್ತಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಾಗಿಲು ಮುಚ್ಚಿದ್ದರಿಂದ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

ನಿರುದ್ಯೋಗ ಹೆಚ್ಚಳವಾಗುತ್ತಿರುವುದರಿಂದ ಯುವಕರು ಕಾಂಗ್ರಸ್ ಕಡೆ ನೋಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಮತದಾನ ಪ್ರಮಾಣದಲ್ಲಿ ಕಾಂಗ್ರೆಸ್ ಮೊದಲ ಸ್ಥಾನದಲ್ಲಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಥಾನಗಳು ಬರಲಿಲ್ಲ. ಸಮ್ಮಿಶ್ರ ಸರಕಾರವನ್ನು ವಾಮಮಾರ್ಗದಿಂದ ಕೆಡವಿ ಯಡಿಯೂರಪ್ಪ ಅಧಿಕಾರಕ್ಕೆ ಬಂದರು. ಆಪರೇಷನ್ ಕಮಲ ಎನ್ನುವುದನ್ನು ಚಾಲ್ತಿಗೆ ತಂದಿದ್ದೇ ಯಡಿಯೂರಪ್ಪ ಎಂದರು.

ಬಿಜೆಪಿ ಸರಕಾರ ಕಾಂಗ್ರೆಸ್ ಅವಧಿಯಲ್ಲಿ ತಂದಿದ್ದ ಶಾದಿ ಭಾಗ್ಯ, ಪಶುಭಾಗ್ಯ ಯೋಜನೆ ನಿಲ್ಲಿಸಿದೆ. ಇಂದಿರಾ ಕ್ಯಾಂಟೀನ್ ನಿಲ್ಲಿಸಲು ಮುಂದಾಗಿದೆ. ಅನ್ನಭಾಗ್ಯದಲ್ಲಿ ಅಕ್ಕಿಯನ್ನು ಕಡಿತಗೊಳಿಸಿದೆ. ಹಂದಿಯೂ ತಿನ್ನದ ರಾಗಿಯನ್ನು ಕೊಡುತ್ತಾರೆ ಎಂದು ಜನರು ದೂರುತ್ತಾರೆ. ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಪಾರದರ್ಶಕವಾಗಿದೆಯೇ ಹೊರತು ಆಡಳಿತವಲ್ಲ. ಯಡಿಯೂರಪ್ಪ ಅವರ ಭ್ರಷ್ಟಾಚಾರದ ಬಗ್ಗೆ ಜೆಸಿಬಿ ಮೂಲಕ ತೋಡುತ್ತಿದ್ದಾರೆ ಎಂದು ಯತ್ನಾಳ್ ಹೇಳುತ್ತಾರೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನೀಡಿದ್ದ ಅನುದಾನವನ್ನು ಹಿಂಪಡೆದಿದ್ದಾರೆ. ಯಾವ ಯೋಜನೆಗೂ ಸರಕಾರದ ಬಳಿ ದುಡ್ಡಿಲ್ಲ, ಬಾದಾಮಿ ಕ್ಷೇತ್ರಕ್ಕೆ ನೀಡಿದ್ದ ನೀರಾವರಿ ಯೋಜನೆಗೆ ದುಡ್ಡು ನೀಡಿಲ್ಲ. ಹಳೇ ಯೋಜನೆಗಳನ್ನು ನಿಲ್ಲಿಸಲು ಹೇಳುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲಿಯೂ ಹತ್ತು ಪರ್ಸೆಂಟ್ ನೀಡಿದರೆ ಮಾತ್ರ ಅನುದಾನ ನೀಡುತ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ ರಾಜ್ಯ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಸರಕಾರದ ಬೇಜವಾಬ್ದಾರಿತನ ಹಾಗೂ ಆಡಳಿತದ ಮೇಲೆ ಹತೋಟಿ ಕಳೆದುಕೊಂಡಿರುವ ಕಾರಣದಿಂದಾಗಿ ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿಯೂ ರಾಜ್ಯ ಮಹಾರಾಷ್ಟ್ರದ ನಂತರದ ಸ್ಥಾನ ಪಡೆದಿದೆ. ದೇಶದಲ್ಲಿ ಕೋವಿಡ್ ಹೆಚ್ಚುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದ್ದು, ಸರಕಾರದ ಮುಂದಾಲೋಚನೆ ಇಲ್ಲದ ಕಾರಣದಿಂದ ಅನುದಾನ ದುರುಪಯೋಗವಾಗಿದೆ. ರಾಜ್ಯದಲ್ಲಿ ಉದ್ಯೋಗ ಕಡಿತವಾಗಿದೆ. ಜಿಎಸ್‍ಟಿ ಅನುದಾನ ಬರಲಿಲ್ಲ. ಶೇ. 2 ರಷ್ಟು ಉದ್ಯೋಗ ಸೃಷ್ಟಿಯಾಗಿಲ್ಲ. ರಾಜ್ಯದಲ್ಲಿ ಬಂಡವಾಳ ಹೂಡುವವರು ಇಲ್ಲ, ದೇಶದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಅವರು ಆರೋಪಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ಮಾಜಿ ಸಂಸದರಾದ ಎಸ್.ಪಿ. ಮುದ್ದಹನುಮೇಗೌಡ, ಬಿ.ಎನ್. ಚಂದ್ರಪ್ಪ, ಮಾಜಿ ಶಾಸಕ ಕೆ.ಎನ್. ರಾಜಣ್ಣ, ಮುಖ್ಯಮಂತ್ರಿಚಂದ್ರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News