ಬ್ಯಾಂಕ್ ಪರೀಕ್ಷೆಗೆ ಹಿಂದಿ, ಇಂಗ್ಲಿಷ್‍ಗೆ ಮಾತ್ರ ಅವಕಾಶ: ಕನ್ನಡಿಗರಿಗೆ ಉದ್ಯೋಗವಕಾಶಗಳು ನಷ್ಟ- ನಾಗಾಭರಣ

Update: 2020-10-29 18:00 GMT

ಬೆಂಗಳೂರು, ಅ.28: ಬ್ಯಾಂಕ್ ಸೇವೆಗಳಿಗೆ ಸಂಬಂಧಿಸಿದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ಕನ್ನಡವೂ ಒಳಗೊಂಡಂತೆ ರಾಜ್ಯ ಭಾಷೆಗಳಲ್ಲಿ ನಡೆಸುವಂತೆ ಕೇಂದ್ರ ಸರಕಾರಕ್ಕೆ ಹಲವು ಸಲ ಮನವಿ ಮಾಡಲಾಗಿತ್ತು. ಆದರೂ ಹಳೆಯ ಮಾರ್ಗಸೂಚಿಯಂತೆ ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕನ್ನಡಿಗರಿಗೆ ಸಾಕಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಕೈತಪ್ಪಲಿವೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡ ಅಭಿವೃದ್ದಿ ಪ್ರಾಧಿಕಾರವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ರನ್ನು ಭೇಟಿ ಮಾಡಿ ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದೆಂದು ಭರವಸೆ ನೀಡಿದ್ದರು. ಆದರೆ, ಈಗ ಸಚಿವರು ತಮ್ಮ ಭರವಸೆಯನ್ನು ಹುಸಿಗೊಳಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ಜನವರಿಯಲ್ಲಿ ನಡೆಯಲಿರುವ ಬ್ಯಾಂಕಿಂಗ್ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಡೆಸಲು ಐಬಿಪಿಎಸ್ ಸಿದ್ಧತೆ ನಡೆಸುತ್ತಿರುವುದರಿಂದ ಸ್ಥಳೀಯ ಭಾಷೆಯಲ್ಲಿ ಮಾತ್ರ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಬಹುಮುಖ್ಯವಾಗಿ ಕನ್ನಡಿಗರಿಗೆ ಬ್ಯಾಂಕಿಂಗ್ ಉದ್ಯೋಗಾವಕಾಶಗಳು ಕೈತಪ್ಪಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮ ಮಟ್ಟದಲ್ಲೂ ಬ್ಯಾಂಕಿಂಗ್ ಸೌಲಭ್ಯವಿರುವುದರಿಂದ ಗ್ರಾಮೀಣರಿಗೆ ಸ್ಥಳೀಯ ಭಾಷೆಯಲ್ಲಿ ಮಾತ್ರ ಸಂವಹನ ನಡೆಸಲು ಸಾಧ್ಯವಿರುತ್ತದೆ. ಹೀಗಾಗಿ ರಾಜ್ಯ ಭಾಷೆಗಳ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ ಹೊಸ ಮಾನದಂಡಗಳನ್ನು ರೂಪಿಸಿ ಕನ್ನಡವೂ ಸೇರಿದಂತೆ ಎಲ್ಲ ರಾಜ್ಯ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸುವಂತೆ ಅವರು ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News