ಪ್ರಕರಣದ ಎಲ್ಲ ಮಾಹಿತಿ ಎಫ್‍ಐಆರ್ ನಲ್ಲಿ ಒಳಗೊಂಡಿರಬೇಕಿಲ್ಲ: ಹೈಕೋರ್ಟ್ ಅಭಿಪ್ರಾಯ

Update: 2020-10-30 13:05 GMT

ಬೆಂಗಳೂರು, ಅ.30: ಪ್ರಕರಣದ ಕುರಿತ ಪ್ರತಿಯೊಂದು ಮಾಹಿತಿಯನ್ನೂ ಎಫ್‍ಐಆರ್ ಒಳಗೊಂಡಿರಬೇಕಿಲ್ಲ. ಸಾಕ್ಷ್ಯಿಗಳ ಹೇಳಿಕೆಗಳನ್ನು ಪಡೆಯಲು ಹಾಗೂ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ವಿಚಾರಣೆ ನಡೆಸಲು ಇನ್ನೂ ಅವಕಾಶ ಇರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿ ಅರ್ಜುನ್ ಎಂಬವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‍ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಮೃತರ ಸಹೋದರಿ ನೀಡಿರುವ ಹೇಳಿಕೆಯನ್ನು ನಂಬಬಾರದು. ಯಾಕೆಂದರೆ ಹಲ್ಲೆ ನಡೆಸಿದವರ ಹೆಸರನ್ನು ಅವರು ಹೇಳಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಇಬ್ಬರು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಯಾವುದೇ ಹೇಳಿಕೆ ನೀಡಿಲ್ಲ. ನಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ, ಜಾಮೀನು ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಎಫ್‍ಐಆರ್ ಎಂದರೆ ವಿಶ್ವಕೋಶವಾಗಬೇಕಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ವಿಚಾರಣೆ ನಡೆಸಲು ಇನ್ನೂ ಸಮಯಾವಕಾಶ ಇದೆ ಎಂದು ತಿಳಿಸಿ ಜಾಮೀನು ಅರ್ಜಿ ತಿರಸ್ಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News